ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದುಲಕ್ಷ್ಮಿ ಧಾರಾವಾಹಿಯಲ್ಲಿ ನಾಯಕಿ ಮುದ್ದುಲಕ್ಷ್ಮಿ ಆಗಿ ಅಭಿನಯಿಸುತ್ತಿರುವ ಅಶ್ವಿನಿ ಅವರು ಕಿರುತೆರೆಗೆ ಪರಿಚಿತರಾಗಿದ್ದು ನಿರೂಪಕಿಯಾಗಿ.
ರಾಜ್ ಮ್ಯೂಸಿಕ್ನಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡ ಅಶ್ವಿನಿ ಒಂದು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ನಿರೂಪಣೆಯ ಮೂಲಕ ಕಿರುತೆರೆಯಲ್ಲಿ ಪರಿಚಿತರಾದ ಅಶ್ವಿನಿಗೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರಕಿತು.
ಬಂದ ಅವಕಾಶ ಬೇಡ ಎನ್ನದೇ ನಟನಾ ಲೋಕಕ್ಕೆ ಕಾಲಿಟ್ಟ ಅಶ್ವಿನಿ ಮೊದಲು ನಟಿಸಿದ್ದು ಅನುರಾಗ ಸಂಗಮ ಧಾರಾವಾಹಿಯಲ್ಲಿ. ಅನುರಾಗ ಸಂಗಮದಲ್ಲಿ ಛಾಯಾ ಎನ್ನುವ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ ಅಶ್ವಿನಿ ಬರೋಬ್ಬರಿ ಒಂದು ವರ್ಷಗಳ ಕಾಲ ಛಾಯಾ ಆಗಿ ವೀಕ್ಷಕರನ್ನು ಮನರಂಜಿಸಿದ್ದರು.
ಇದನ್ನೂ ಓದಿ : ಮಾಲ್‌ನಲ್ಲಿ ಕೇರಳದ ನಟಿಗೆ ಲೈಂಗಿಕ ಕಿರುಕುಳ: ಸಿಸಿಟಿವಿ ದೃಶ್ಯದಲ್ಲಿ ಆರೋಪಿಗಳು ಸೆರೆ
ಮುಂದೆ ಕುಲವಧು ಧಾರಾವಾಹಿಯಲ್ಲಿ ಅಭಿನಯಿಸಿದ ಅಶ್ವಿನಿ ಅಲ್ಲಿ ಕಾಣಿಸಿಕೊಂಡಿದ್ದು ನೆಗೆಟಿವ್ ಅವತಾರದಲ್ಲಿ! ಶಶಿಕಲಾ ಎಂಬ ವಿಲನ್ ಪಾತ್ರದಲಿ ಅಶ್ವಿನಿ ನಟಿಸಿದ್ದು, ಆ ಪಾತ್ರ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು.
ಮುಂದೆ ಗಿರಿಜಾ ಕಲ್ಯಾಣ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ ಅಶ್ವಿನಿ ಅಷ್ಟರಲ್ಲಾಗಲೇ ಸಂಪೂರ್ಣ ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ನಿರ್ಧಾರ ಮಾಡಿದ್ದರು.
ಅಷ್ಟರಲ್ಲಿ ಸ್ಟಾರ್ ಸುವರ್ಣ ವಾಹಿನಿಯ ಮುದ್ದುಲಕ್ಷ್ಮಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರಕಿತು. ಇದೀಗ ಮುದ್ದುಲಕ್ಷ್ಮಿ ಧಾರಾವಾಹಿಯೇ ನನ್ನ ಬದುಕು ಎಂದು ನಗುನಗುತ್ತಾ ಹೇಳುವ ಅಶ್ವಿನಿ "ಜನರ ಪ್ರೀತಿಗೆ ನಾನು ಆಭಾರಿ.
ಜನ ನನ್ನನ್ನು ಅರ್ಥಾತ್ ಮುದ್ದುಲಕ್ಷ್ಮಿಯನ್ನು ಮನೆ ಮಗಳಾಗಿ ಪ್ರೀತಿ ನೀಡುತ್ತಾರೆ. ನನ್ನ ಕಷ್ಟಕ್ಕೆ ಸ್ಪಂದಿಸುವ ಅವರನ್ನು ನೋಡಿದಾಗ ಬಣ್ಣದ ಲೋಕಕ್ಕೆ ಬಂದುದು ಸಾರ್ಥಕ ಎಂದೆನಿಸುತ್ತದೆ" ಎನ್ನುತ್ತಾರೆ ಅಶ್ವಿನಿ.