ಮಂಗಳೂರು: ಸ್ಯಾಂಡಲ್ವುಡ್ಗೆ ಕರಾವಳಿ ಜಿಲ್ಲೆಯ ನಿರ್ದೇಶಕರೊಬ್ಬರಿಂದ ಹೊಸ ಸಿನಿಮಾ ಪರಿಚಯವಾಗುತ್ತಿದೆ. ಇದೇ ವಾರ ಅಂದರೆ ಅಕ್ಟೋಬರ್ 18 ರಂದು ಬಿಡುಗಡೆಯಾಗಲಿರುವ 'ಸವರ್ಣದೀರ್ಘಸಂಧಿ' ಸಿನಿಮಾ, ವ್ಯಾಕರಣ ಹಾಸ್ಯದ ಮೂಲಕ ಪ್ರೇಕ್ಷಕರ ಮನಗೆಲ್ಲಲು ಸಿದ್ಧತೆ ನಡೆಸಿದೆ.
ತುಳು ಭಾಷೆಯಲ್ಲಿ ದಾಖಲೆ ನಿರ್ಮಿಸಿದ 'ಚಾಲಿಪೋಲಿಲು' ಸಿನಿಮಾವನ್ನು ನಿರ್ದೇಶಿಸಿದ್ದ ವೀರೇಂದ್ರ ಶೆಟ್ಟಿ ಕಾವೂರು ಇದೀಗ 'ಸವರ್ಣದೀರ್ಘಸಂಧಿ' ಎಂಬ ಕನ್ನಡ ಸಿನಿಮಾ ತೆರೆಗೆ ತರಲು ರೆಡಿಯಾಗಿದ್ದಾರೆ. ವೀರೇಂದ್ರ ಶೆಟ್ಟಿ ನಿರ್ದೇಶನದ 'ಚಾಲಿಪೋಲಿಲು' ತುಳು ಸಿನಿಮಾ ಚಿತ್ರಮಂದಿರದಲ್ಲಿ 500 ದಿನಗಳು ಪ್ರದರ್ಶನ ಆಗುವ ಮೂಲಕ ದಾಖಲೆ ನಿರ್ಮಿಸಿತ್ತು. ಆ ಬಳಿಕ ಕನ್ನಡ ಸಿನಿಮಾ ನಿರ್ದೇಶನದಲ್ಲಿ ತೊಡಗಿಸಿಕೊಂಡ ವೀರೇಂದ್ರ ಶೆಟ್ಟಿ ಆ ಕೆಲಸ ಪೂರ್ಣಗೊಳಿಸಿ ಇದೀಗ ಸಿನಿಮಾ ಬಿಡುಗಡೆಗೊಳಿಸುವ ಹಾದಿಯಲ್ಲಿದ್ದಾರೆ.
ಈ ಚಿತ್ರ ಸಂಪೂರ್ಣ ಹಾಸ್ಯಮಯವಾಗಿದ್ದು ಕನ್ನಡದ ವ್ಯಾಕರಣವನ್ನಿಟ್ಟುಕೊಂಡು ವೀರೇಂದ್ರ ಶೆಟ್ಟಿ ವಿಭಿನ್ನ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಕಥೆ, ಚಿತ್ರಕಥೆ ಜೊತೆಗೆ ಸಂಭಾಷಣೆ ಕೂಡಾ ಬರೆದಿರುವ ವೀರೇಂದ್ರ ಶೆಟ್ಟಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಹಿರಿಯ ನಟಿ ವಿನಯಾಪ್ರಸಾದ್ ಸಹೋದರ ರವಿಭಟ್ ಪುತ್ರಿ ಕೃಷ್ಣಾ ಭಟ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ನೀಡಿದ್ದಾರೆ.
ಖ್ಯಾತ ಗಾಯಕರಾದ ಶಂಕರ್ ಮಹದೇವನ್, ಶ್ರೇಯಾ ಘೋಷಾಲ್, ಶಶಿಕಲಾ, ಸುನಿಲ್, ವಿಧಿಷಾ ವಿಶ್ವಾಸ್ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಈಗಾಗಲೇ ಶ್ರೇಯಾ ಘೋಷಾಲ್ ಹಾಡಿರುವ ಹಾಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಒಟ್ಟಿನಲ್ಲಿ ತುಳುವಿನಲ್ಲಿ ಸೂಪರ್ ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕ ಕನ್ನಡ ಚಿತ್ರ ಪ್ರೇಕ್ಷಕರನ್ನು ಹೇಗೆ ಮೋಡಿ ಮಾಡಲಿದ್ದಾರೆ ಕಾದು ನೋಡಬೇಕು.