ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ವಿತರಕ ಕೆ.ಸಿ.ಎನ್. ಚಂದ್ರಶೇಖರ್ (69) ಕಳೆದ ಮಧ್ಯರಾತ್ರಿ 12.30ರ ವೇಳೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಕನ್ನಡದ ಅದ್ಧೂರಿ ಬಜೆಟ್ ಸಿನಿಮಾಗಳ ನಿರ್ಮಾಪಕರಾಗಿದ್ದ ಚಂದ್ರಶೇಖರ್, ವರನಟ ಡಾ. ರಾಜ್ಕುಮಾರ್ ನಟನೆಯ 'ಶರಪಂಜರ' ಚಿತ್ರಕ್ಕೆ ಸಹ ನಿರ್ಮಾಪಕರಾಗಿ ವೃತ್ತಿ ಬದುಕು ಆರಂಭಿಸಿದ್ದರು. 'ಶರಪಂಜರ' ಅಂದಿನ ದಿನಗಳಲ್ಲಿ ಬಹುದೊಡ್ಡ ಯಶಸ್ಸು ಕಂಡ ಚಿತ್ರವಾಗಿತ್ತು. ಬಳಿಕ ನಿರ್ಮಾಪಕರಾಗಿ 'ಹುಲಿಯ ಹಾಲಿನ ಮೇವು', 'ಭಕ್ತ ಜ್ಞಾನದೇವ', 'ಧರ್ಮಯುದ್ಧ', 'ತಾಯಿ' ಮೊದಲಾದ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಚಂದ್ರಶೇಖರ್ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಕೆಸಿಎನ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು, ಮಗ ಶ್ರೇಯಸ್ ಇದ್ದಾರೆ. ಮಧ್ಯಾಹ್ನ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಚಿತಾಗಾರದಲ್ಲಿ ಅವರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ನಿರ್ಮಾಪಕ ಚಂದ್ರಶೇಖರ್ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.
ಇದನ್ನೂ ಓದಿ: Karnataka Unlock: ಅಗತ್ಯ ವಸ್ತುಗಳ ಮಳಿಗೆ, ಕೈಗಾರಿಕಾ ಘಟಕಗಳಿಗೆ ಮಾತ್ರ ನಿರ್ಬಂಧಿತ ಅನ್‌ಲಾಕ್