ಸ್ಯಾಂಡಲ್ವುಡ್ ರಾವಣ, ಬಿಗ್ಬಾಸ್ ಖ್ಯಾತಿಯ ಜೆಕೆ ಗಡ್ಡ ಬಿಟ್ಟು 'ನೀರೆ' ಯನ್ನು ಹುಡುಕುತ್ತ ಗಾಂಧಿನಗರಕ್ಕೆ ಬರುತ್ತಿದ್ದಾರೆ. ಜಯರಾಮ್ ಕಾರ್ತಿಕ್ 'ನೀರೆ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಗಿಟಾರ್ ವಾದಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇಂದು ಬೆಂಗಳೂರಿನ ನಾಗರಬಾವಿಯ ಮಹದೇಶ್ವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. ಕಾರ್ಯಕ್ರಮಕ್ಕೆ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಆಗಮಿಸಿ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಇದು ಹೆಣ್ಣೊಂದರ ಸುತ್ತ ಸುತ್ತುವ ಕಥೆಯಾಗಿದ್ದು, ಚಿತ್ರಕ್ಕೆ ವಿ. ನಾಗೇಂದ್ರ ಪ್ರಸಾದ್ ಗರಡಿಯಲ್ಲಿ ಪಳಗಿರುವ ಶ್ರೀ ಚರಣ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಲವ್, ಸೆಂಟಿಮೆಂಟ್, ಫ್ರೆಂಡ್ಶಿಪ್ ಬಗ್ಗೆ ಕೂಡಾ ತೋರಿಸಲಾಗಿದೆ. ಬೆಂಗಳೂರು, ಉಡುಪಿ ಹಾಗೂ ಇನ್ನಿತರ ಸ್ಥಳಗಳ ಸುತ್ತಮುತ್ತ ಚಿತ್ರದ ಶೂಟಿಂಗ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದ್ದು ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಶ್ರೀಚರಣ್ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಜಯರಾಮ್ ಕಾರ್ತಿಕ್, ಈ ಚಿತ್ರಕ್ಕಾಗಿ ನಾಲ್ಕು ತಿಂಗಳಿನಿಂದ ಗಡ್ಡ ಬಿಟ್ಟು, ಪಾತ್ರಕ್ಕಾಗಿ ಗಿಟಾರ್ ನುಡಿಸುವುದನ್ನು ಕಲಿಯುತ್ತಿದ್ದೇನೆ. ಚಿತ್ರದಲ್ಲಿ ಎರಡು ಫೈಟ್ಗಳು ಹೈಲೆಟ್ ಆಗಿದ್ದು ಅದಕ್ಕೂ ತರಬೇತಿ ಪಡೆಯುತ್ತಿದ್ದೇನೆ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿದರು. ಸಮೀಕ್ಷಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಜೆಕೆ ಸ್ನೇಹಿತನಾಗಿ ದಿಲೀಪ್ ರಾಜ್ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಇವರಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದು, ಕಾರಣಾಂತರಗಳಿಂದ ಇಬ್ಬರೂ ದೂರವಾಗಿ ಮತ್ತೆ ಒಂದಾಗುತ್ತಾರೆ. ಏಕೆ ದೂರವಾಗುತ್ತಾರೆ, ಮತ್ತೆ ಯಾವ ಕಾರಣದಿಂದ ಒಂದಾಗುತ್ತಾರೆ ಎಂಬುದು ಚಿತ್ರದ ಟ್ವಿಸ್ಟ್. ಚಿತ್ರವನ್ನು ಉದ್ಯಮಿ ಸುಜಾತ ಸಣ್ಣಪ್ಪಯ್ಯ ನಿರ್ಮಿಸುತ್ತಿದ್ದಾರೆ.