'ರೈಡರ್' ಕನ್ನಡ ಮಾತ್ರಲ್ಲದೆ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಸಿನಿಮಾ. 'ಸೀತಾರಾಮ ಕಲ್ಯಾಣ' ಚಿತ್ರದ ನಂತರ ಯುವರಾಜ ನಿಖಿಲ್ ಕುಮಾರಸ್ವಾಮಿ ಅಭಿನಯಿಸುತ್ತಿರೋ ಬಹು ನಿರೀಕ್ಷಿತ ಸಿನಿಮಾ.
ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ನಲ್ಲೇ ಅಭಿಮಾನಿಗಳಿಗೆ ಕುತೂಹಲ ಹುಟ್ಟಿಸಿರೋ 'ರೈಡರ್' ಸಿನಿಮಾ, ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 24 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ, 'ರೈಡರ್' ಸಿನಿಮಾಗೆ ಗುಡ್ ಲಕ್ ಹೇಳಿದ್ದಾರೆ.
ಸದ್ಯಕ್ಕೆ ರಾಜಕೀಯ ಹಾಗು ಚಿತ್ರರಂಗದಿಂದ ದೂರು ಉಳಿದಿರುವ ಮೋಹಕ ತಾರೆ ರಮ್ಯಾ ಕಳೆದ ಎರಡು ವರ್ಷಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲೇ ಧ್ವನಿ ಎತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಜೊತೆಗೆ ಕನ್ನಡ ಸಿನಿಮಾಗಳು ಹಾಗು ಚಿತ್ರರಂಗದ ಸ್ನೇಹಿತರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಉತ್ತರಿಸುತ್ತಿರುತ್ತಾರೆ. ಈ ವರ್ಷದ ಕೊನೆ ವಾರದಲ್ಲಿ ಸಾಕಷ್ಟು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಅದರಲ್ಲಿ ನಿಖಿಲ್ ಅಭಿನಯದ 'ರೈಡರ್' ಸಿನಿಮಾ ಕೂಡ ಬಿಡುಗಡೆ ಆಗುತ್ತಿದ್ದು, ನಿಖಿಲ್ ಸಿನಿಮಾಗೆ ನನ್ನ ಕಡೆಯಿಂದ ಗುಡ್ ಲಕ್ ಅಂತಾ ರಮ್ಯಾ ವಿಶ್ ಮಾಡಿದ್ದಾರೆ.
ನಿಖಿಲ್ ಈ ಚಿತ್ರದಲ್ಲಿ ಬಾಸ್ಕೆಟ್‌ಬಾಲ್ ಆಟಗಾರನ ಪಾತ್ರ ಮಾಡುತ್ತಿದ್ದು, ನಾಯಕಿಯಾಗಿ ಕಾಶ್ಮೀರಿ ಪರ್ದೇಸಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಲವ್ ಕೆಮಿಸ್ಟ್ರಿ ಬೊಂಬಾಟ್ ಆಗಿ ವರ್ಕ್‌ಔಟ್ ಆಗಿದೆ. ಲವ್ ಜತೆಗೆ ಫ್ಯಾಮಿಲಿ ಸೆಂಟಿಮೆಂಟ್ ಹೊಂದಿರುವ 'ರೈಡರ್' ಚಿತ್ರದ ಹಾಡುಗಳು ಹಾಗು ಟ್ರೇಲರ್ ಸಖತ್ ಸೌಂಡ್ ಮಾಡುತ್ತಿದೆ. ಚಿತ್ರದಲ್ಲಿ ಮತ್ತೊಬ್ಬ ನಾಯಕಿಯಾಗಿ ಅನುಷಾ ರೈ ಗಮನ ಸೆಳೆಯಲಿದ್ದು, ಉಳಿದಂತೆ ಚಿಕ್ಕಣ್ಣ ಹಾಗೂ ಶಿವರಾಜ್ ಕೆ.ಆರ್.ಪೇಟೆ ಹಾಸ್ಯ ನೋಡುಗರಿಗೆ ಮನರಂಜನೆ ನೀಡುತ್ತದೆ. ಇದರ ಜತೆಗೆ ದತ್ತಣ್ಣ, ಶೋಭರಾಜ್, ರಾಜೇಶ್ ನಟರಂಗ, ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ, ಸಂಪದ ಹುಲಿವಾನ, ನಿಹಾರಿಕ ಸೇರಿದಂತೆ ದೊಡ್ಡ ತಾರಬಳಗವೇ ಚಿತ್ರದಲ್ಲಿದೆ.
ತೆಲುಗಿನಲ್ಲಿ 'ಒಕ್ಕಾ ಲೈಲಾ ಕೋಸಂ' ಮತ್ತು 'ಗುಂಡೆ ಜಾರಿ ಗಲ್ಲನ್‌ಥೈಯಿಂದೆ' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ವಿಜಯ್ ಕುಮಾರ್ ಕೊಂಡ ರೈಡರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಿಖಿಲ್ ಕುಮಾರಸ್ವಾಮಿ ಗೆಳೆಯ ಸುನೀಲ್ ಗೌಡ ಹಾಗೂ ಲಹರಿ ಆಡಿಯೋ ಸಂಸ್ಥೆಯಡಿ ಈ ಸಿನಿಮಾವನ್ನ ನಿರ್ಮಾಣ ಮಾಡಲಾಗಿದೆ. 'ರೈಡರ್' ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನ, ಶ್ರೀಶ ಕುದುವಳ್ಳಿ ಕ್ಯಾಮರಾ, ಶರತ್ ಚಕ್ರವರ್ತಿ ಸಂಭಾಷಣೆ, ಭೂಷಣ್ ಕೋರಿಯೋಗ್ರಫಿ, ಡಾ.ರವಿವರ್ಮ ಸಾಹಸ ಚಿತ್ರಕ್ಕಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಈ ಚಿತ್ರಕ್ಕೆ ಮ್ಯೂಸಿಕ್ ನೀಡಿದ್ದಾರೆ. ಡಿ.24 ಕ್ಕೆ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ರೈಡರ್' ಚಿತ್ರ ಬಿಡುಗಡೆಯಾಗಲಿದೆ.