ಬೆಂಗಳೂರು: ಚಂದನವನದಲ್ಲಿ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ ಸಿಲುಕಿರುವ ನಟಿ ರಾಗಿಣಿ ಸದ್ಯ ಸಿಸಿಬಿ ಪೊಲೀಸರ ವಶದಲ್ಲಿದ್ದು, ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದಾರೆ. ರಾಗಿಣಿ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯವಾಗಲಿದೆ.
ರಾಗಿಣಿ ಬಂಧನವಾದ ದಿನ ಮಾತ್ರ ಪೊಲೀಸರು ವಿಚಾರಣೆಗೆ ಒಳಪಡಿಸಿದ್ರು. ನಂತ್ರ ರಾಗಿಣಿ ಬೆನ್ನು ನೋವು, ವೈಯಕ್ತಿಕ ಕಾರಣದ ನೆಪವೊಡ್ಡಿ ತನಿಖೆಗೆ ಸಹಕಾರ ನೀಡಿರಲಿಲ್ಲ ಎನ್ನಲಾಗಿದೆ. ಆದರೆ ಇಂದು ಕಸ್ಟಡಿ ಅಂತ್ಯ ಹಿನ್ನೆಲೆ ಸಿಸಿಬಿ ಪೊಲೀಸರು ಮತ್ತೆ ವಶಕ್ಕೆ ಕೇಳುವ ಸಾಧ್ಯತೆ ಹೆಚ್ಚಾಗಿದೆ. ಯಾಕಂದ್ರೆ ರಾಗಿಣಿ ಬಳಿಯಿಂದ ಬಹಳಷ್ಟು ಮಾಹಿತಿಗಳನ್ನ ಪಡೆಯುವುದು ಸಿಸಿಬಿಗೆ ಅಗತ್ಯವಾಗಿದೆ. ಈಗಾಗಲೇ ರಾಗಿಣಿ ಮನೆಯಲ್ಲಿ ಸಿಗರೇಟ್ ತುಂಬಿದ ಮಾದಕ ವಸ್ತು ಸಿಕ್ಕಿದ್ದು, ಈ ಪ್ರಶ್ನೆಗಳಿಗೆ ರಾಗಿಣಿ ಉತ್ತರ ನೀಡುವುದು ಅಗತ್ಯವಾಗಿದೆ.
ಮೊದಲ ದಿನ ರಾಗಿಣಿ ಆಪ್ತ ರವಿಶಂಕರ್ ಹಾಗೂ ನಿಮಗಿರುವ ಸಂಬಂಧವೇನು? ಎಂಬ ಪ್ರಶ್ನೇಗೆ ಕೇವಲ ಸ್ನೇಹಿತನೆಂಬ ಉತ್ತರ ಸಿಕ್ಕಿತ್ತು. ಹಾಗೆಯೇ ಮನೆಯಲ್ಲಿರುವ ಸಿಗರೇಟ್ ಮಾದಕ ವಸ್ತು ಪ್ರಶ್ನೆಗೆ ನನಗೂ ಅದಕ್ಕೂ ಸಂಬಂಧವಿಲ್ಲ ಎಂದಿದ್ದರು. ಪಾರ್ಟಿಯಲ್ಲಿ ಡ್ರಗ್ಸ್ ಸಪ್ಲೈ ಬಗ್ಗೆ ಮಾಹಿತಿ ಕೇಳಿದಾಗ, ಅದು ಗೊತ್ತಿಲ್ಲವೆಂದು ತನಿಖಾಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಿದ್ದರು.
ಇಂದು ಸಿಸಿಬಿ ಪೊಲೀಸರು ಜಡ್ಜ್ ಎದುರು ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಮತ್ತೊಂದೆಡೆ ಈಗಾಗಲೇ ರಾಗಿಣಿ ಪರ ವಕೀಲರು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದು, ಜಾಮೀನು ಒಂದು ವೇಳೆ ಸಿಕ್ಕರೆ ವಿಚಾರಣೆಗೆ ಕರೆದಾಗ ರಾಗಿಣಿ ತನಿಖೆಗೆ ಹಾಜರಾಗಬೇಕಾಗುತ್ತದೆ.
ಸದ್ಯ ರಾಗಿಣಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಪೊಲೀಸರ ಭದ್ರತೆಯಲ್ಲಿ ಇದ್ದು, ಹಿರಿಯಾಧಿಕಾರಿಗಳ ಎದುರು ಮೊದಲು ವಿಚಾರಣೆಗೆ ಹಾಜರುಪಡಿಸಿ ನಂತರ ಸಂಜೆ ಜಡ್ಜ್ ಎದುರು ಹಾಜರುಪಡಿಸಲಾಗುತ್ತಿದೆ. ಬಳಿಕ ಸಿಸಿಬಿ ಹೆಚ್ಚಿನ ವಿಚಾರಣೆಗೆ ರಾಗಿಣಿಯನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.