ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಹಣೆಬರಹ ಚೆನ್ನಾಗಿದ್ದರೆ ರಾತ್ರೋರಾತ್ರಿ ಸ್ಟಾರ್ ಪಟ್ಟ ಪಡೆಯಬಹುದು. ಈ ಮಾತು ಎಷ್ಟೋ ಪ್ರತಿಭೆಗಳ ವಿಷಯದಲ್ಲಿ ನಿಜವಾಗಿದೆ. ಇನ್ನು ಚಿತ್ರರಂಗದಲ್ಲಿ ಕೆಲವರು ನಿರ್ದೇಶಕರಾಗಿ ಬಂದು ಇಂದು ನಾಯಕರಾಗಿ ಹೆಸರು ಮಾಡಿದ್ಧಾರೆ.
ಕಾಶೀನಾಥ್
ಬಹಳ ವರ್ಷಗಳ ಹಿಂದೆ ನಾಯಕ ಅಂದ್ರೆ, ಒಳ್ಳೆ ಹೈಟ್, ಕಟ್ಟು ಮಸ್ತಾದ ಬಾಡಿ ಇರಬೇಕು, ನೋಡಲು ಅಂದವಾಗಿ ಇರಬೇಕು ಎಂಬ ಕಾಲವಿತ್ತು. ಆದರೆ ಇದೆಲ್ಲವನ್ನೂ ಸುಳ್ಳು ಮಾಡಿದ್ದು ನಟ ಕಾಶೀನಾಥ್. ಸುಮಾರು ಮೂರು ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ಕಾಶೀನಾಥ್ ಮಡಿವಂತಿಕೆ ಬಿಟ್ಟು ಸಿನಿಮಾಗಳನ್ನು ಮಾಡಿದರು.
1976ರಲ್ಲಿ 'ಅಪರೂಪದ ಅತಿಥಿ' ಎಂಬ ಸಿನಿಮಾ ಮೂಲಕ, ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಕಾಶೀನಾಥ್ ಎಂಟ್ರಿ ನೀಡಿದರು. ನಿರ್ದೇಶಕನಾಗಲು ಬಂದ ಕಾಶೀನಾಥ್ ಕೇವಲ 2 ಸಿನಿಮಾಗಳನ್ನು ಮಾತ್ರ ನಿರ್ದೇಶಿಸಿದರು. 1984ರಲ್ಲಿ ಬಿಡುಗಡೆಯಾದ 'ಅನುಭವ' ಚಿತ್ರದ ಮೂಲಕ ನಾಯಕನಾಗಿ ಕಮಾಲ್ ಮಾಡಿದರು. ನಂತರ ಅವರು ನಿರ್ದೇಶನದ ಜೊತೆಗೆ ನಾಯಕ ಆಗಿ ಕೂಡಾ ಹೆಸರು ಮಾಡಿದರು. ಕಾಶೀನಾಥ್ ಸಿನಿಮಾಗಳು ಎಂದರೆ ಸಾಕು ಜನರು ಮುಗಿಬಿದ್ದು ನೋಡುತ್ತಿದ್ದರು. ಇದಕ್ಕೆ ಅನಂತನ ಅವಾಂತರ, ಅನುಭವ, ಅವಳೇ ನನ್ನ ಹೆಂಡ್ತಿ, ಚಪಲ ಚನ್ನಿಗರಾಯ ಸಿನಿಮಾಗಳೇ ಸಾಕ್ಷಿ.
ಎಸ್.ನಾರಾಯಣ್
ಡೈರೆಕ್ಟರ್ ಹೀರೋ ಆದವರ ಸಾಲಿನಲ್ಲಿ ಎಸ್.ನಾರಾಯಣ್ ಕೂಡಾ ಒಬ್ಬರು. ಎಸ್. ನಾರಾಯಣ್ ಹೀರೋ ಆಗಬೇಕು ಎಂದೇ 1981ರಲ್ಲಿ ಬೆಂಗಳೂರಿಗೆ ಬಂದವರು. ಆದರೆ ಅವರಿಗೆ ಅಷ್ಟು ಸುಲಭವಾಗಿ ಅವಕಾಶ ದೊರೆಯಲಿಲ್ಲ. ಆದ್ದರಿಂದ ಅಂದಿನ ಖ್ಯಾತ ನಿರ್ದೇಶಕರಾದ ಭಾರ್ಗವ, ಎ.ಟಿ. ರಘು, ರಾಜ್‌ಕಿಶೋರ್ ಮುಂತಾದವರ ಬಳಿ ಸಹಾಯಕ ನಿರ್ದೇಶಕರಾಗಿ ನಾರಾಯಣ್ ಕೆಲಸ ಮಾಡಿದರು.
'ಚೈತ್ರದ ಪ್ರೇಮಾಂಜಲಿ' ಚಿತ್ರದ ಮೂಲಕ ನಾರಾಯಣ್ ಸ್ವತಂತ್ಯ್ರ ನಿರ್ದೇಶಕರಾದರು.ಈ ಚಿತ್ರ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಅಲ್ಲಿಂದ ಎಸ್. ನಾರಾಯಣ್ ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದರು. ಇದರೊಂದಿಗೆ 'ಅಂಜಲಿ ಗೀತಾಂಜಲಿ' ಎಂಬ ಚಿತ್ರದ ಮೂಲಕ ಹೀರೋ ಕೂಡಾ ಆದರು. 'ನನ್ನವಳು ನನ್ನವಳು', 'ಕುರಿಗಳು ಸಾರ್ ಕುರಿಗಳು' ಸೇರಿದಂತೆ ಕೆಲವೊಂದು ಸಿನಿಮಾಗಳಲ್ಲಿ ಎಸ್. ನಾರಾಯಣ್ ನಾಯಕನಾಗಿ ಕೂಡಾ ಸಕ್ಸಸ್ ಆದರು.
ಉಪೇಂದ್ರ
ಇನ್ನು ರಿಯಲ್ ಸ್ಟಾರ್ ಉಪೇಂದ್ರ ಅಂದಿಗೂ, ಇಂದಿಗೂ ನಟ, ನಿರ್ದೇಶಕನಾಗಿ ಹೆಸರು ಉಳಿಸಿಕೊಂಡಿದ್ದಾರೆ. ಕಾಶೀನಾಥ್ ಅವರ ಗರಡಿಯಲ್ಲಿ ಪಳಗಿದ ಉಪೇಂದ್ರ ಸ್ಕ್ರಿಪ್ಟ್, ಸಾಹಿತ್ಯ ಬರೆಯುತ್ತಾ ಚಿತ್ರರಂಗಕ್ಕೆ ಕಾಲಿಟ್ಟರು. ಕಾಶೀನಾಥ್ ಅವರ ಬಹಳಷ್ಟು ಸಿನಿಮಾಗಳಲ್ಲಿ ಉಪ್ಪಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಜಗ್ಗೇಶ್ ಅಭಿನಯದ 'ತರ್ಲೆ ನನ್ಮಗ' ಚಿತ್ರದ ಮೂಲಕ ಉಪೇಂದ್ರ ಸ್ವತಂತ್ಯ್ರ ನಿರ್ದೇಶಕರಾದರು. ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಜಗ್ಗೇಶ್ ಅವರನ್ನು ನಾಯಕನಾಗಿ ಪರಿಚಯಿಸಿದ್ದು ಕೂಡಾ ಉಪೇಂದ್ರ ಅವರೇ.
ಉಪೇಂದ್ರ ಅವರಿಗೆ ಹೆಸರು ತಂದುಕೊಟ್ಟದ್ದು ಮಾತ್ರ 'ಶ್' ಸಿನಿಮಾ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೃಷ್ಟಿಸಿದ್ದು ಮಾತ್ರ ನಿಜ. ಕ್ರಮೇಣ ಆಪರೇಷನ್ ಅಂತ ನಿರ್ದೇಶಿಸಿದರು. ಆದರೆ 'ಓಂ' ಸಿನಿಮಾ ಮಾತ್ರ ಸ್ಯಾಂಡಲ್ವುಡ್ನಲ್ಲಿ ಹೊಸ ದಾಖಲೆಯನ್ನೇ ಬರೆಯಿತು. ಹೀಗೆ ವಿಭಿನ್ನ ಬಗೆಯ ಚಿತ್ರಗಳನ್ನು ನಿರ್ದೇಶಿಸಿದ ಉಪೇಂದ್ರ ‘ಎ’ ಚಿತ್ರದ ಮೂಲಕ ಹೀರೋ ಆಗಿ ಕೂಡಾ ಪರಿಚಯವಾದರು. ಉಪೇಂದ್ರ, ಕುಟುಂಬ, ಪ್ರೀತ್ಸೆ, ಸೂಪರ್, ಬುದ್ಧಿವಂತ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಾಯಕನಾಗಿ ನಟಿಸುವ ಮೂಲಕ ಬುದ್ಧಿವಂತ ನಿರ್ದೇಶಕ ಕಮ್ ನಟ ಎಂದು ಹೆಸರಾಗಿದ್ದಾರೆ.
ಎಸ್. ಮಹೇಂದರ್
1992 ರಲ್ಲಿ ತೆರೆಕಂಡ 'ಪ್ರಣಯದ ಪಕ್ಷಿಗಳು' ಚಿತ್ರದಿಂದ, ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಿರ್ದೇಶಕ ಎಸ್ ಮಹೇಂದರ್. ಹೆಚ್ಚಾಗಿ ಫ್ಯಾಮಿಲಿ ಸೆಂಟಿಮೆಂಟ್ ಚಿತ್ರಗಳನ್ನು ನಿರ್ದೇಶಿಸಿರುವ ಮಹೇಂದರ್ ಸಕ್ಸಸ್ ಲಿಸ್ಟ್ನಲ್ಲಿ ಸಾಕಷ್ಟು ಸಿನಿಮಾಗಳಿವೆ. ಶೃತಿ ಜೊತೆ 'ಗಟ್ಟಿಮೇಳ' ಸಿನಿಮಾದಲ್ಲಿ ನಟಿಸುವ ಮೂಲಕ ಎಸ್. ಮಹೇಂದರ್ ಹೀರೋ ಆದರು. ಆ ಸಿನಿಮಾ ಕೂಡಾ ಒಂದು ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟ ಆಯ್ತು. ಆದರೂ ಮಹೇಂದರ್ ಮತ್ತೆ ಹೀರೋ ಆಗುವ ಸಾಹಸ ಮಾಡಲಿಲ್ಲ.
ಪ್ರೇಮ್
'ಕರಿಯ', 'ಎಕ್ಸ್ಕ್ಯೂಸ್ ಮಿ', 'ಜೋಗಿ' ಅಂತಹ ಹಿಟ್ ಸಿನಿಮಾಗಳನ್ನು ನೀಡಿ ಹ್ಯಾಟ್ರಿಕ್ ನಿರ್ದೇಶಕ ಎನಿಸಿಕೊಂಡ ಪ್ರೇಮ್ 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದಲ್ಲಿ ನಾಯಕನಾಗಿ ನಟಿಸಿದರು. ಅದಾದ ನಂತರ 'ಪ್ರೇಮ್ ಅಡ್ಡ', 'ಡಿಕೆ' ಚಿತ್ರಗಳಲ್ಲೂ ನಾಯಕನಾದರು. ಆದರೆ ಈ ಯಾವ ಚಿತ್ರಗಳು ಕೂಡಾ ಯಶಸ್ವಿಯಾಗಲಿಲ್ಲ.
ರಿಷಭ್ ಶೆಟ್ಟಿ
ಇವರೆಲ್ಲರ ಜೊತೆ 'ರಿಕ್ಕಿ' ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಭರವಸೆ ನಿರ್ದೇಶಕ ಎಂದು ಕರೆಸಿಕೊಂಡ ನಿರ್ದೇಶಕ ರಿಷಭ್ ಶೆಟ್ಟಿ. 'ಕಿರಿಕ್ ಪಾರ್ಟಿ' ಹಾಗೂ 'ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ' ಚಿತ್ರವನ್ನು ನಿರ್ದೇಶಿಸಿ ಬೇಡಿಕೆ ಹೆಚ್ಚಿಸಿಕೊಂಡರು. ನಂತರ 'ಬೆಲ್ ಬಾಟಮ್' ಚಿತ್ರದ ಮೂಲಕ ಹೀರೋ ಆಗಿ ರಿಷಭ್ ಯಶಸ್ಸು ಕಂಡರು. ಹೀರೋ ಆಗಿ ಇನ್ನೆರಡು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ ಶೆಟ್ರು.
ಓಂ ಪ್ರಕಾಶ್ ರಾವ್ ಹಾಗೂ ಶಿವಮಣಿ, ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕರು. ಇವರೂ ಕೂಡಾ ಹೀರೋಗಳಾಗಿ ಅದೃಷ್ಟ ಪರೀಕ್ಷೆಗಿಳಿದರು. ಆದರೆ ಅಂದುಕೊಂಡಂತೆ ಯಶಸ್ಸು ಕಾಣಲಿಲ್ಲ. ಒಟ್ಟಿನಲ್ಲಿ ನಿರ್ದೇಶನದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ನಾವೂ ಹೀರೋ ಕೂಡಾ ಆಗಬಹುದು ಎಂಬುದನ್ನು ಸಾಬೀತು ಮಾಡಿ ತೋರಿಸಿದ್ದಾರೆ.