ಕೊರೊನಾದಿಂದಾಗಿ ಪ್ರತಿನಿತ್ಯ ಸಾವಿರಾರು ಜನರು ಒಂದು ಹೊತ್ತಿನ ಊಟಕ್ಕೆ ಕಷ್ಟ ಪಡಬೇಕಾಗಿದೆ. ಇಂತಹ ಸಮಯದಲ್ಲಿ ಸ್ಯಾಂಡಲ್ವುಡ್ ಸಿನಿ ಮಂದಿ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ.
ನಿರ್ದೇಶಕ ಆರ್. ಚಂದ್ರು, ಕೆಲವು ದಿನಗಳ ಹಿಂದೆ ಕನ್ನಡ ಚಿತ್ರರಂಗದ ಕಾರ್ಮಿಕರು, ತಂತ್ರಜ್ಞರಿಗೆ ತಮ್ಮ ಕೈಲಾದ ಸಹಾಯ ಮಾಡಿದರು. ಇದೀಗ ಚಂದ್ರು, ತಾವು ಹುಟ್ಟಿ ಬೆಳೆದ ಊರಿನಲ್ಲಿ ಕಷ್ಟ ಪಡುತ್ತಿರುವ ಜನರ ಸಹಾಯಕ್ಕೆ ನಿಂತಿದ್ದಾರೆ.
ಕನ್ನಡ ಚಲನಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ, ತನ್ನದೇ ಆದ ಛಾಪು ಮೂಡಿಸಿರೋ ನಿರ್ದೇಶಕ ಚಂದ್ರು, ಚಿಕ್ಕಬಳ್ಳಾಪುರ ಕೇಶಾವರ ಗ್ರಾಮದ ಸುಮಾರು ಸಾವಿರ ಮನೆಗಳಿಗೆ 25 ಕೆಜಿಯ ಅಕ್ಕಿ ಮೂಟೆ ನೀಡಿದ್ದಾರೆ. ನಾನು ರೈತನ ಮಗ, ಕೊರೊನಾ ಸಂಕಷ್ಟದ ಕಾಲದಲ್ಲಿ ನನ್ನೂರಿನವರಿಗೆ ನೆರವಾಗುವುದು ನನ್ನ ಧರ್ಮ. ಇಂದು ಮತ್ತು ಎಂದೆಂದಿಗೂ ನಾನು ಮಣ್ಣಿನ ಋಣ ತೀರಿಸಲು ಮುಂದಾಗಿರುತ್ತೇನೆ ಎನ್ನುತ್ತಾರೆ ಚಂದ್ರು. ಸಹಜವಾಗಿ ಹುಟ್ಟಿ ಬೆಳೆದ ಊರನ್ನ, ಬೆಳೆದ ಮೇಲೆ ಬಹುತೇಕರು ಮರೆಯುವುದುಂಟು. ಆದರೆ ಕೆಲವರು ಮಾತ್ರ ತಮ್ಮೂರಿನ ಜನರ ಕಷ್ಟಕ್ಕೆ ಸ್ಪಂದಿಸುವ ಗುಣವಿರುತ್ತದೆ ಅನ್ನೋದಕ್ಕೆ ನಿರ್ದೇಶಕ ಚಂದ್ರು ಉದಾಹರಣೆ.
ಸದ್ಯ ಉಪೇಂದ್ರ ಅಭಿನಯದ ಕಬ್ಜ ಸಿನಿಮಾಗೆ ನಿರ್ದೇಶಕ ಆರ್. ಚಂದ್ರು ಆ್ಯಕ್ಷನ್ ಕಟ್ ಹೇಳ್ತಿದ್ದು, ಮುಕ್ಕಾಲು ಭಾಗ ಚಿತ್ರೀಕರಣ ಮುಗಿದಿದೆ.