ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ರಸ್ತೆ ಅಪಘಾತದಲ್ಲಿ ಮೆದುಳಿಗೆ ಮತ್ತು ತೊಡೆಗೆ ಗಾಯವಾಗಿ ಆಸ್ಪತ್ರೆ ಸೇರಿದ್ದರು. ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.
ಸುದ್ದಿಗೋಷ್ಠಿ ನಡೆಸಿದ ಅಪೋಲೋ ಆಸ್ಪತ್ರೆಯ ವೈದ್ಯರು, ಅವರ ಆರೋಗ್ಯ ಕ್ಷಣಕ್ಷಣಕ್ಕೆ ಕ್ಷೀಣಿಸುತ್ತಿದೆ. ಚೇತರಿಕೆ ಪ್ರಮಾಣ ಕಡಿಮೆ ಎಂದು ತಿಳಿಸಿದರು.
ಅಪಘಾತ ನಡೆದಾಗ ಮೆದುಳಿಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅವರಿಗೆ ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಿ, ಐಸಿಯುನಲ್ಲಿ ಇರಿಸಲಾಗಿದೆ. ಆದರೆ ಅವರು ಚಿಕಿತ್ಸೆಗೆ ಯಾವುದೇ ರೀತಿಯಲ್ಲೂ ಸ್ಪಂದಿಸುತ್ತಿಲ್ಲ. ಮೆದುಳಿನ ಬಲಭಾಗದಲ್ಲಿ ಹೆಚ್ಚು ಹೊಡೆತ ಬಿದ್ದು ತೀವ್ರ ರಕ್ತಸ್ರಾವ ಆಗಿತ್ತು. ನಿನ್ನೆ ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ಸರ್ಜರಿ ಮಾಡಿದೆವು. ಅದಾಗಿ 36 ಗಂಟೆ ಕಳೆದರೂ ಅವರ ಬ್ರೇನ್ ಪ್ರತಿಕ್ರಿಯಿಸುತ್ತಿಲ್ಲ. ಎಷ್ಟೇ ಚಿಕಿತ್ಸೆ ನೀಡಿದರೂ ಪ್ರತಿಕ್ರಿಯಿಸುತ್ತಿಲ್ಲ ಎಂದು ತಿಳಿಸಿದರು.
ಮೆದುಳಿನ ಕೆಲಸಗಳು ನಿಂತು ಹೋಗಿವೆ. ಇದನ್ನು ಬ್ರೇನ್ ಫೇಲ್ಯೂರ್ ಎಂದು ಹೇಳುತ್ತೇವೆ. ಆದರೆ ಅವರ ದೈಹಿಕ ಕೆಲಸಗಳು ಸರಿಯಾಗಿ ನಡೆಯುತ್ತಿವೆ. ಇದು ಮುಂದುವರಿದರೆ ಚೇತರಿಕೆ ಸಾಧ್ಯತೆ ಕಡಿಮೆ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ವೆಂಟಿಲೇಟರ್ ಮೇಲೆ ವಿಜಯ್ ಇದ್ದಾರೆ. ನಾವು ಏನೇ ಚಿಕಿತ್ಸೆ ಕೊಟ್ಟರೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಅವರ ಮೆದುಳು ನಿಷ್ಕ್ರಿಯವಾಗುತ್ತಿದೆ. ಮೆದುಳು ನಿಷ್ಕ್ರಿಯ ಹಂತದಲ್ಲಿ ಬಿಪಿ ಕಂಟ್ರೋಲ್ ಇರಲ್ಲ. ಅವರ ತಲೆಬುರುಡೆ ಸಹ ಡ್ಯಾಮೇಜ್ ಆಗಿದೆ. ಅವರ ಬ್ರೇನ್ ಡೆಡ್ ಆದರೆ ಅಂಗಾಂಗ ದಾನಕ್ಕೆ ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ಮಾಹಿತಿ ನೀಡಿದರು.
ವಿಜಯ್ ಅಂಗಾಂಗ ದಾನಕ್ಕೆ ನಿರ್ಧಾರ :
ವಿಜಯ್ ಅವರ ಸೋದರ ಸಿದ್ದೇಶ್ ಮಾತನಾಡಿ, ಬ್ರೈನ್ ಡೆಡ್ ಸ್ಟೇಜ್ನಿಂದ ಹೊರಬರೋದು ಕಷ್ಟವಿದೆ. ಸಮಾಜದ ಒಳಿತಿಗಾಗಿ ಸಂಚಾರಿ ವಿಜಯ್ ದುಡಿಯುತ್ತಿದ್ದರು. ಆದ್ದರಿಂದ ಅವರ ಅಂಗಾಂಗಗಳನ್ನ ದಾನ ಮಾಡಲು ನಿರ್ಧರಿಸಿದ್ದೇವೆ. ನಾರ್ಮಲ್ ಡೆತ್ ಆದರೆ ಅಂಗಾಂಗ ದಾನ ಮಾಡಕ್ಕಾಗಲ್ಲ. ಇದರಿಂದ ನಾಲ್ಕು ಜನರಿಗೆ ಸಹಾಯವಾಗಲಿ ಅಂತ ಬಯಸುತ್ತೇವೆ. ಅವನಿಲ್ಲ ಅನ್ನೋದನ್ನ ಕಲ್ಪಿಸಿಕೊಳ್ಳಲು ನನ್ನಿಂದ ಆಗುತ್ತಿಲ್ಲ ಎಂದು ಭಾವುಕರಾದರು.
ಕೋವಿಡ್ ಕಷ್ಟಕಾಲದಲ್ಲಿ ಕೆಲಸ ಮಾಡಿದ್ದಾನೆ. ನೆರೆಪರಿಹಾರಕ್ಕಾಗಿಯೂ 24 ಗಂಟೆ ಶ್ರಮಿಸಿದ್ದಾನೆ. ಅವನ ಹಿಂದೆ ನಿಂತ ಎಲ್ಲ ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೆ, ವಿಶೇಷವಾಗಿ ಡಿಸಿಎಂ ಅಶ್ವತ್ಥ ನಾರಾಯಣ ಅವರಿಗೆ ಧನ್ಯವಾದ ಎಂದರು.