ಹೈದರಾಬಾದ್: ಮಾನಹಾನಿ ಮಾಡಿದ ಮೂರು ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಟಿ ಸಮಂತಾ ಸಲ್ಲಿಸಿದ್ದ ಅರ್ಜಿಯನ್ನು ಹೈದರಾಬಾದ್‌ನ ಕೂಕಟ್‌ಪಲ್ಲಿ ನ್ಯಾಯಾಲಯ ವಿಚಾರಣೆ ನಡೆಸಿದ್ದು, ಸಮಂತಾಗೆ ಸಂಬಂಧಿಸಿದ ವಿಡಿಯೋಗಳನ್ನು ತೆಗೆದುಹಾಕುವಂತೆ ಎರಡು ಯೂಟ್ಯೂಬ್ ಚಾನೆಲ್‌ಗಳು, ಸಿಎಲ್ ರಾವ್‌ಗೆ ಆದೇಶ ನೀಡಿದೆ. ಅದರ ಹೊರತಾಗಿ ಸಮಂತಾ ಅವರ ವೈಯಕ್ತಿಕ ವಿವರಗಳನ್ನು ಯಾರೂ ಬಹಿರಂಗಪಡಿಸಬಾರದು ಎಂದು ಕೋರ್ಟ್ ಆದೇಶ ನೀಡಿದೆ.
ಯುಟ್ಯೂಬ್ ಚಾನಲ್‌ಗಳು ಪೋಸ್ಟ್ ಮಾಡಿದ ವಿಡಿಯೋ ಲಿಂಕ್‌ಗಳನ್ನು ತೆಗೆದುಹಾಕಲು ಆದೇಶಿಸಲಾಗಿದ್ದು, ವೈಯಕ್ತಿಕ ವಿವರಗಳನ್ನು ಪೋಸ್ಟ್ ಮಾಡದಂತೆ ಸಮಂತಾಗೂ ನ್ಯಾಯಾಲಯ ಸಲಹೆ ನೀಡಿದೆ.
ತಮ್ಮ ಬಗ್ಗೆ ಇಲ್ಲ ಸಲ್ಲದ ವಿಷಯಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ನಟಿ ಸಮಂತಾ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಹೈದರಾಬಾದ್‌ನ ಕೂಕಟ್‌ಪಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಸುಮನ್ ಟಿವಿ, ತೆಲುಗು ಪ್ಯಾಪುಲರ್ ಟಿವಿ ಹಾಗೂ ಟಾಪ್ ತೆಲುಗು ಟಿವಿ ಯೂಟ್ಯೂಬ್ ಚಾನೆಲ್‌ಗಳಲ್ಲಿ ವಿಶ್ಲೇಕರಾದ ಡಾ.ಸಿ.ಎಲ್. ವೆಂಕಟರಾವ್ ಅವರು ಅಕ್ಕಿನೇನಿ ನಾಗಚೈತನ್ಯ ಅವರೊಂದಿಗಿನ ವೈವಾಹಿಕ ಜೀವನದ ಬಗ್ಗೆ ಸುಳ್ಳು ಪ್ರಚಾರ ಮಾಡಿದ್ದಾರೆ ಎಂದು ಸಮಂತಾ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ತಮ್ಮ ವೈಯಕ್ತಿಕ ಪ್ರತಿಷ್ಠೆಗೆ ಧಕ್ಕೆಯಾಗುವಂತೆ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿದ್ದಾರೆ. ಮಾಧ್ಯಮಗಳು ಮತ್ತು ನಿಯತಕಾಲಿಕೆಗಳ ಮೂಲಕ ಬೇಷರತ್ ಸಾರ್ವಜನಿಕ ಕ್ಷಮೆಯಾಚಿಸಲು ಆದೇಶಿಸುವಂತೆ ಸಮಂತಾ ನ್ಯಾಯಾಲಯಕ್ಕೆ ಮನವಿ ಮಾಡಿದರು.