ಸಲ್ಮಾನ್ ಖಾನ್ಗೆ ಫೇಸ್ಬುಕ್ನಲ್ಲಿ ಜೀವ ಬೆದರಿಕೆ ಹಾಕಿದ್ದ ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಜಗದೀಶ್ ಮತ್ತು ಜೆಕಿ ಎಂದು ಗುರುತಿಸಲಾಗಿದ್ದು, ಅಗ್ಗದ ಪ್ರಚಾರಕ್ಕೆ ಈ ರೀತಿ ಮಾಡಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಚೋಪಸಾನಿ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಪ್ರವೀಣ್ ಆಚಾರ್ಯ, ಆರೋಪಿಗಳು ಅಗ್ಗದ ಪ್ರಚಾರಕ್ಕೆ ಜೀವ ಬೆದರಿಕೆ ಹಾಕಿದ್ದಾರೆ. ಬಂಧಿತರಿಬ್ಬರೂ ಕಾರು ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಕಳೆದ ಸೆ.16ರಂದು ಗ್ಯಾರಿ ಶೂಟರ್ ಎಂದ ಫೇಸ್‌ಬುಕ್ ಅಕೌಂಟಿನಿಂದ ಸಲ್ಮಾನ್ಗೆ ಜೀವ ಬೆದರಿಕೆ ಹಾಕಲಾಗಿತ್ತು. 'ಕಾನೂನಿಗಿಂತ ನೀವು ದೊಡ್ಡವರಲ್ಲ, ಹಾಗೆ ಭಾವಿಸಿಕೊಂಡಿದ್ದು ನಿಮ್ಮ ತಪ್ಪು. ಭಾರತೀಯ ಕಾನೂನಿನಿಂದ ನಿಮ್ಮ ಜೀವವನ್ನು ನೀವು ಉಳಿಸಿಕೊಳ್ಳಬಹುದು. ಆದರೆ, ಬಿಶ್ನೋಯ್ ಸಮುದಾಯ ಮತ್ತು ಸೌಪು ಪಕ್ಷ ನಿಮಗೆ ಜೀವಾವಧಿ ಶಿಕ್ಷೆ ನೀಡಿದೆ. ಸೌಪು ನ್ಯಾಯಾಲಯದಲ್ಲಿ ನೀವೊಬ್ಬ ಅಪರಾಧಿ. ಯುವತಿಯನ್ನು ಗೌರವಿಸಿ, ಪ್ರಾಣಿಗಳನ್ನು ಉಳಿಸಿ, ಬಡವರಿಗೆ ಸಹಾಯ ಮಾಡಿ' ಎಂದು ಬರೆದು ಪೋಸ್ಟ್ ಮಾಡಲಾಗಿತ್ತು.