ಮುಂಬೈ: ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅಭಿನಯದ ಬಹು ನಿರೀಕ್ಷಿತ ಸಿನಿಮಾವಾದ ‘ಟೈಗರ್ 3’ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಚಿತ್ರತಂಡ 1 ನಿಮಿಷ 8 ಸೆಕೆಂಡ್ಗಳ ಟೀಸರ್ ಬಿಡುಗಡೆ ಮಾಡಿದ್ದು, ಕತ್ರಿನಾ ಕೈಫ್ ಹಾಗೂ ಸಲ್ಮಾನ್ ಖಾನ್ ಎಂಟ್ರಿ ವಿಶೇಷವಾಗಿ ಮೂಡಿ ಬಂದಿದೆ. ಇದೇ ವೇಳೆ, ಚಿತ್ರ ಬಿಡುಗಡೆ ದಿನಾಂಕವನ್ನು ಸಲ್ಮಾನ್ ಘೋಷಿಸಿದ್ದು, ಏಪ್ರಿಲ್ 21ಕ್ಕೆ ಈದ್ ಹಬ್ಬದ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ತಿಳಿಸಿದ್ದಾರೆ.
ಈ ಸಿನಿಮಾವನ್ನು ಮನೀಶ್ ಶರ್ಮಾ ನಿರ್ದೇಶಿಸಿದ್ದಾರೆ. ಯಶ್ ರಾಜ್ ಫಿಲ್ಮ್ಸ್‌ನಿಂದ ಬಂಡವಾಳ ಹೂಡಲಾಗಿದೆ. 'ಟೈಗರ್ 3' ಅನ್ನು ಭಾರತ ಮತ್ತು ಹೊರಗಿನ ಹಲವಾರು ರಮಣೀಯ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.
'ಟೈಗರ್ 3' ಕತ್ರಿನಾ ಕೈಫ್ , ಸಲ್ಮಾನ್ ಖಾನ್ ಅಭಿನಯದ ಸ್ಪೈ ಥ್ರಿಲ್ಲರ್ ಫ್ರಾಂಚೈಸಿ ಮೂರನೇ ಭಾಗವಾಗಿದೆ. 2012 ರಲ್ಲಿ ಕಬೀರ್ ಖಾನ್ ನಿರ್ದೇಶನದ ಮೊದಲ ಕಂತಿನ 'ಏಕ್ ಥಾ ಟೈಗರ್' ಬಿಡುಗಡೆಯಾಗಿತ್ತು. ಎರಡನೇಯದು ಟೈಗರ್ ಜಿಂದಾ ಹೈ 2017 ರಲ್ಲಿ ಬಿಡುಗಡೆಯಾಯಿತು ಮತ್ತು ಇದನ್ನು ಅಲಿ ಅಬ್ಬಾಸ್ ಜಾಫರ್ ನಿರ್ದೇಶಿಸಿದ್ದಾರೆ.