'ಟಗರು' ಸಿನಿಮಾದ ಒಂದೊಂದು ಹಾಡುಗಳು ಸೃಷ್ಟಿಸಿದ್ದ ಹವಾ ಇನ್ನೂ ಹಾಗೇ ಇದೆ. ಹೀಗಿರುವಾಗ ಈ ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ನಿರ್ಮಾಣದಲ್ಲಿ ದುನಿಯಾ ವಿಜಯ್ ನಿರ್ದೇಶಿಸುತ್ತಿರುವ 'ಸಲಗ' ಚಿತ್ರದ ಆಡಿಯೋ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.

ಸಿನಿಮಾ ಬಿಡುಗಡೆಗೂ ಮುನ್ನವೇ ಆಡಿಯೋ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಎಲ್ಲಾ ಟಾಪ್ ಆಡಿಯೋ ಕಂಪನಿಗಳ ಪೈಪೋಟಿ ನಡುವೆ ಕೊನೆಗೆ ಚಿತ್ರದ ಆಡಿಯೋ ಎ2 ಕಂಪನಿಗೆ ಸೇಲ್ ಆಗಿದೆ. ಆದರೆ ಎಷ್ಟು ಮೊತ್ತಕ್ಕೆ ಆಡಿಯೋ ಮಾರಾಟವಾಗಿದೆ ಎಂಬ ವಿಷಯವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲವಾದರೂ ಶೀಘ್ರದಲ್ಲೇ ಆ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಹೇಳಿದೆ.

ಎ2 ಎಂಬುದು ಹೊಸ ಆಡಿಯೋ ಸಂಸ್ಥೆ ಅಲ್ಲ, ಅಶ್ವಿನಿ ಆಡಿಯೋ ಸಂಸ್ಥೆಯನ್ನು ಇದೀಗ ಎ2 ಆಡಿಯೋ ಎಂದು ಮರುನಾಮಕರಣ ಮಾಡಲಾಗಿದೆ. 'ಜೋಗಿ' ಸಿನಿಮಾ ನಿರ್ಮಾಪಕ ಕೃಷ್ಣ ಪ್ರಸಾದ್ ಹಾಗೂ ಸಹೋದರ ರಾಮ್ಪ್ರಸಾದ್ ಜೊತೆಗೂಡಿ ಮತ್ತೆ ಈ ಆಡಿಯೋ ಸಂಸ್ಥೆಯನ್ನು ರಿಲಾಂಚ್ ಮಾಡುತ್ತಿದ್ದಾರೆ. 'ಸಲಗ' ಚಿತ್ರದ ಮೂಲಕ ಈ ಆಡಿಯೋ ಸಂಸ್ಥೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತಿದೆ. 'ಸಲಗ' ಚಿತ್ರದ ಹಾಡುಗಳನ್ನು ಕೇಳಿ ಥ್ರಿಲ್ ಆಗಿರುವ ಕೃಷ್ಣಪ್ರಸಾದ್ ಎ2 ಆಡಿಯೋ ಕಂಪನಿ ರಿಲಾಂಚ್ಗೆ ಇದು ಸರಿಯಾದ ಸಮಯ ಎಂದು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಆಡಿಯೋ ಬಿಡುಗಡೆಯಾಗಲಿದೆ.

ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ 'ಸಲಗ' ಸಿನಿಮಾದಲ್ಲಿ ಡಾಲಿ ಧನಂಜಯ್, ದುನಿಯಾ ವಿಜಯ್, ಸಂಜನಾ ಆನಂದ್, ಕಾಕ್ರೋಚ್ ಖ್ಯಾತಿಯ ಸುಧೀಂದ್ರ ಸೇರಿದಂತೆ ಅಪ್ರತಿಮ ಪ್ರತಿಭಾವಂತ ತಾರಾಬಳಗ ಇದೆ. ವೀನಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಆಡಿ 'ಟಗರು' ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು ಮುಂದಿನ ವರ್ಷ ತೆರೆಗೆ ಬರಲಿದೆ.