ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮನಸಾರೆ ಧಾರಾವಾಹಿಯಲ್ಲಿ ನಾಯಕ ಯುವರಾಜನಾಗಿ ಅಭಿನಯಿಸಿದ್ದ ಸಾಗರ್ ಬಿಳೀಗೌಡ ಅವರು ಕಾರಣಾಂತರಗಳಿಂದ ಇತ್ತೀಚೆಗೆ ಪಾತ್ರದಿಂದ ಹೊರಬಂದಿದ್ದರು. ಜೊತೆಗೆ ಧಾರಾವಾಹಿಯಿಂದ ಹೊರಬರುವಾಗಲೇ ಆದಷ್ಟು ಬೇಗ ಹೊಚ್ಚ ಹೊಸ ಧಾರಾವಾಹಿಯ ಮೂಲಕ ಬರುತ್ತೇನೆ ಎಂದು ಹೇಳಿದ್ದರು.

ಇದೀಗ ಸ್ವಪ್ನಾ ಕೃಷ್ಣ ನಿರ್ದೇಶನದ ಸತ್ಯ ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಯಲ್ಲಿ ಸಾಗರ್ ಕಾಣಿಸಿಕೊಳ್ಳಲಿದ್ದಾರೆ. ಕಿನ್ನರಿ ಧಾರಾವಾಹಿಯ ಮೂಲಕ ಕಿರುತೆರೆ ಪಯಣ ಶುರು ಮಾಡಿರುವ ಸಾಗರ್, ಲಂಡನ್ ನಲ್ಲಿ ಎಂಬಿಎ ಪದವಿಯನ್ನು ಸಹ ಪಡೆದಿದ್ದಾರೆ.

ನಟನೆಯತ್ತ ಒಲವು ಹೊಂದಿದ್ದ ಸಾಗರ್ ನಾಗಾಭರಣ ಅವರ ನಟನಾ ತರಬೇತಿ ಕೇಂದ್ರಕ್ಕೆ ಸೇರಿದರು. ಮುಂದೆ ಕಿನ್ನರಿಯಲ್ಲಿ ನಂದು ಆಗಿ ಕಿರುತೆರೆಗೆ ಕಾಲಿಟ್ಟ ಸಾಗರ್ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯೂ ಆದರು. ಕಿನ್ನರಿಯ ನಂತರ ಮನಸಾರೆ ಧಾರಾವಾಹಿಯಲ್ಲಿ ನಾಯಕರಾಗಿ ಅಭಿನಯಿಸಿ ಅಲ್ಲೂ ಸೈ ಎನಿಸಿಕೊಂಡ ಸಾಗರ್ ಇದೀಗ ಹೊಸ ಧಾರಾವಾಹಿಯ ಮೂಲಕ ಮನರಂಜನೆ ನೀಡಲು ತಯಾರಾಗಿದ್ದಾರೆ.

ಸ್ವಪ್ನ ಕೃಷ್ಣ ನಿರ್ದೇಶನದ ಸತ್ಯ ಧಾರಾವಾಹಿಯಲ್ಲಿ ನಾಯಕರಾಗಿ ನಟಿಸುವ ಮೂಲಕ ಸಾಗರ್ ಮಗದೊಮ್ಮೆ ವೀಕ್ಷಕರ ಮುಂದೆ ಬರುತ್ತಿದ್ದಾರೆ. ತೆಲುಗಿನ ಸೂರ್ಯಕಾಂತಮ್ನ ರಿಮೇಕ್ ಇದಾಗಿದ್ದು ಇದರಲ್ಲಿ ಸಾಗರ್ ಅವರಿಗೆ ನಾಯಕಿಯಾಗಿ ಗೌತಮಿ ಜಾಧವ್ ಕಾಣಿಸಿಕೊಳ್ಳಲಿದ್ದಾರೆ.