ಸರಿಗಮಪ ಲಿಟಿಲ್ ಚಾಂಪ್ಸ್ ಸೀಸನ್ 16ರ ಗ್ರಾಂಡ್ ಫಿನಾಲೆ ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಸ್ಪರ್ಧಿಗಳು ಹಾಗೂ ಪ್ರೇಕ್ಷಕರು ಉತ್ಸುಕರಾಗಿದ್ದಾರೆ. ಸರಿಗಮಪ ಕಿರೀಟ ಯಾರ ಮುಡಿಗೇರಲಿದೆ ಎಂಬ ಕುತೂಹಲ ಮೂಡಿಸಿದೆ.
ಟಾಪ್ ಆರು ಫೈನಾಲಿಸ್ಟ್ಗಳಾಗಿ ಅಭಿಸ್ಯಾಂತ್, ಅಪ್ರಮೇಯ, ಓಂಕಾರ್ ಪತ್ತಾರ್, ಗುರುಕಿರಣ್ ಹೆಗ್ಡೆ, ಸಾಕ್ಷಿ ಕಲ್ಲೂರು, ಸುನಾದ್ ಎಂ.ಪ್ರಸಾದ್ ಭಾಗವಹಿಸುತ್ತಿದ್ದಾರೆ. ಈಗಾಗಲೇ ಪ್ರಥಮ ಸುತ್ತು ಮುಕ್ತಾಯವಾಗಿದ್ದು, ಮೊದಲ ಸುತ್ತಿನಲ್ಲಿ ಹಾಡಿದ ಹಾಡುಗಳು ಇಲ್ಲಿವೆ.
ಮೊದಲ ಸುತ್ತಿನಲ್ಲಿ ಹಾಡಿದ ಹಾಡುಗಳು: ಗುರುಕಿರಣ್ ಹೆಗ್ಡೆ, ಮಲಯ ಮಾರುತ ಚಿತ್ರದ ಯೇಸುದಾಸ್ ಅವರು ಹಾಡಿರುವ ಶಾರದೆ ದಯೆ ತೋರಿದೆ, ಹಾಡನ್ನು ಹಾಡುವ ಮೂಲಕ ಪ್ರೇಕ್ಷಕರ ಮನಸೂರೆ ಗೊಳಿಸಿದರು. ಹಾಸನದ ಸುನಾದ್, ಬೊಂಬೆಯಾಟವಯ್ಯ ಹಾಡನ್ನು ಹಾಡುತ್ತಾ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡು ತೀರ್ಪುಗಾರರಿಂದ ಮೆಚ್ಚುಗೆಗೆ ಪಾತ್ರರಾದರು. ಫಿನಾಲೆಯಲ್ಲಿ ಡಿಟೇಲ್ ಕಿಂಗ್ ಎಂಬ ಬಿರುದನ್ನು ರಾಜೇಶ್ ಕೃಷ್ಣನ್ ನೀಡಿದರು. ಇದು ಬೊಂಬೆಯಾಟವಯ್ಯ ಅಲ್ಲ, ಇದು ಹಾಡಿನ ಆಟವಯ್ಯ ಎಂದು ಹಂಸಲೇಖ ಅಭಿಪ್ರಾಯಪಟ್ಟರು. ಶೃಂಗೇರಿಯ ಅಭಿಸ್ಯಾಂತ್, ಜಗದೇಕ ವೀರ ಚಿತ್ರದ ಶಿವ ಶಂಕರಿ ಹಾಡನ್ನು ಹಾಡಿದರು.
ಗೋಕಾಕ್ ಓಂಕಾರ್ ಪತ್ತಾರ್, ಮೂಲ ಗಾಯಕರಾದ ಶಂಕರ್ ಮಹಾದೇವನ್ ಅವರ ಆಟ ಹುಡುಗಾಟವೋ, ಪರಮಾತ್ಮನಾಟವೋ ಹಾಡಿಗೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದ್ದು, ಒನ್ಸ್ ಮೋರ್, ಒನ್ಸ್ ಮೋರ್ ಎಂಬ ಪ್ರೇಕ್ಷಕರ ಒತ್ತಾಯಕ್ಕೆ ಓಂಕಾರ್ ಮತ್ತೊಮ್ಮೆ ಹಾಡಿ ರಂಜಿಸಿದರು. ಸಾಕ್ಷಿ ಕಲ್ಲೂರ್, ಸ್ವರ್ಣ ಗೌರಿ ಚಿತ್ರದ ಜಾನಕಿ ಅವರು ಹಾಡಿರುವ ಜಯಗೌರಿ ಜಗದೇಶ್ವರಿ ಹಾಡು ಹಾಡುವ ಮೂಲಕ ಮಹಿಳೆಯರ ಮನಗೆದ್ದರು. ಅಪ್ರಮೇಯ ಕವಿರತ್ನ ಕಾಳಿದಾಸ ಚಿತ್ರದ ಮಾಣಿಕ್ಯ ವೀಣಾ ಮುಪಾಲಾಲಯಂತಿ ಹಾಡನ್ನು ಹಾಡಿದರು. ವಯಸ್ಸಿಗೆ ಮೀರಿದ ಹಾಡನ್ನು ಆಯ್ಕೆ ಮಾಡಿಕೊಂಡು ಪ್ರಯತ್ನ ಮಾಡಿದ್ದಾರೆಂದು ತೀರ್ಪುಗಾರರು ಅಭಿಪ್ರಾಯಪಟ್ಟರು.