ಖ್ಯಾತ ಗಾಯಕಿ ಎಸ್. ಜಾನಕಿ ಅವರ ಆರೋಗ್ಯದ ಬಗ್ಗೆ ಕೆಲವು ದಿನಗಳಿಂದ ಇಲ್ಲಸಲ್ಲದ ಸುದ್ದಿಗಳು ಹರಿದಾಡುತ್ತಿದ್ದು ಸ್ವತ: ಜಾನಕಿ ಅವರ ಪುತ್ರ ಮುರಳಿಕೃಷ್ಣ ತಾಯಿ ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟನೆ ನೀಡುವ ಮೂಲಕ ಸುಳ್ಳು ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
ಕಳೆದ ವರ್ಷ ಕಾರ್ಯಕ್ರಮವೊಂದರ ನಿಮಿತ್ತ ಮೈಸೂರಿನ ಬಂದಿದ್ದಾಗ ಎಸ್. ಜಾನಕಿಯವರು ಅನಾರೋಗ್ಯಕ್ಕೆ ಒಳಗಾಗಿದ್ದರು ಆಗ ಅವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಕೆಲವು ದಿನಗಳ ನಂತರ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಚೆನ್ನೈಗೆ ಹೋಗಿದ್ದರು. ಮತ್ತೆ ಇತ್ತೀಚೆಗೆ ಎಸ್. ಜಾನಕಿ ಅವರನ್ನು ಚೆನ್ನೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಾನಕಿ ಅವರಿಗೆ ಶಸ್ತ್ರ ಚಿಕಿತ್ಸೆ ನಡೆದಿದ್ದು ಅಮ್ಮ ಆರೋಗ್ಯವಾಗಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಗುಣಮುಖರಾಗಿ ಮನೆಗೆ ಬರಲಿದ್ದಾರೆ ಎಂದು ಮುರಳಿ ಕೃಷ್ಣ ಹೇಳಿದ್ದಾರೆ.
ಎಸ್. ಜಾನಕಿ ಅವರು ಕಳೆದ 63 ವರ್ಷಗಳಿಂದ 17 ಭಾಷೆಗಳಲ್ಲಿ ಸುಮಾರು 48,000 ಹಾಡುಗಳನ್ನು ಹಾಡಿ ಸಂಗೀತ ಪ್ರಿಯರ ಹೃದಯಕ್ಕೆ ಲಗ್ಗೆ ಇಟ್ಟಿದ್ಧಾರೆ. ಎಷ್ಟೋ ಗಾಯಕರಿಗೆ ಇಂದಿಗೂ ಜಾನಕಿ ಅಮ್ಮ ಸ್ಫೂರ್ತಿಯಾಗಿ ನಿಂತಿದ್ದಾರೆ.