ಕಾಳಿಮಠದ ಶ್ರೀ ಋಷಿಕುಮಾರ ಸ್ವಾಮೀಜಿ 'ದಂಡಕ ' ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದರು. ಆದರೆ ಕಾರಣಾಂತರಗಳಿಂದ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಇದೀಗ ಕಾಳಿಮಠದ ಸ್ವಾಮೀಜಿ ಮತ್ತೊಂದು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
'ಪ್ರಚಂಡ ಪುಟಾಣಿಗಳು ' ಚಿತ್ರದಲ್ಲಿ ಋಷಿಕುಮಾರಸ್ವಾಮೀಜಿ ಒಂದು ಹಾಡು ಹಾಡಿದ್ದಾರೆ. ರಾಜೀವ್ ಕೃಷ್ಣ ನಿರ್ದೇಶನದ 'ಪ್ರಚಂಡ ಪುಟಾಣಿಗಳು' ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಈಗ ಋಷಿ ಕುಮಾರ ಸ್ವಾಮೀಜಿ ಅವರ ಕಂಠದಲ್ಲಿ ರಾಜಾಜಿನಗರದ ಸ್ಟುಡಿಯೋದಲ್ಲಿ ಸಂಗೀತ ನಿರ್ದೇಶಕ ವಿನು ಮನಸ್ಸು ಹಾಡೊಂದನ್ನು ರೆಕಾರ್ಡ್ ಮಾಡಿದ್ದಾರೆ. ಇದಕ್ಕೂ ಮುನ್ನ ಋಷಿಕುಮಾರಸ್ವಾಮಿ ಕೆಲವೊಂದು ಭಕ್ತಿಗೀತೆಗಳನ್ನು ಹಾಡಿದ್ದರು. ಆದರೆ ಇದೇ ಮೊದಲ ಬಾರಿಗೆ ಅವರು ಸಿನಿಮಾಗಾಗಿ ಹಾಡಿದ್ದಾರೆ.

'ಎಂತ ಚೆಂದವು ನೋಡು ಎಂತ ಅಂದವು ನೋಡು....ಯಾರೋ ಯಾರೋ ಯಾರೋ ಹೆತ್ತೋರು ನಿಮ್ಮನ್ನ...ವಂದನೆ ವಂದನೆ ಗಣಪತಿಯೇ ನಿನಗೆ ವಂದನೆ '...ಎಂಬ ಹಾಡನ್ನು ಸುರೇಶ್ ಕಂಬಳಿ ಬರೆದಿದ್ದಾರೆ. ಡಿ ಅಂಡ್ ಡಿ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವಿ. ಸುನಿತಾ ಹಾಗೂ ಎನ್. ರಘು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
'ಪ್ರಚಂಡ ಪುಟಾಣಿಗಳು ' ಚಿತ್ರದಲ್ಲಿ ಹಿರಿಯ ನಟ ಅವಿನಾಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಇವರೊಂದಿಗೆ ಮಾಸ್ಟರ್ ಕೃತಿನ್, ಮಾಸ್ಟರ್ ಶ್ರೀ ಹರ್ಷ, ಬೇಬಿ ಅಂಕಿತ, ಬೇಬಿ ಸುಪ್ರಿಯ, ಕೋಲಾರ ಬಾಳು, ಡ್ಯಾನಿ ಕೃಷ್ಣಮೂರ್ತಿ, ಮದನ್ ಮಂಜು, ಶ್ರೀಕಾಂತ್, ಸಂದೀಪ್, ರೇವಣ್ಣ, ಹನುಮಂತಪ್ಪ, ರಾಮ್ ಜನಾರ್ಧನ್ ಹಾಗೂ ಇತರರು ಅಭಿನಯಿಸಿದ್ದಾರೆ.
ಚಿತ್ರಕ್ಕೆ ಪ್ರಮೋದ್ ಭಾರತಿ ಛಾಯಾಗ್ರಹಣ, ವಿನಯ್ ಸಂಕಲನ ಇದೆ. ಎರಡನೇ ಹಂತದ ಚಿತ್ರೀಕರಣ ಕೈವಾರ, ನಂದಿ ಗಿರಿಧಾಮ, ಕೋಲಾರದ ಅಂತರಗಂಗೆ ಪ್ರದೇಶಗಳಲ್ಲಿ ಮಾಡಲಾಗುವುದು ಎಂದು ಚಿತ್ರದ ನಿರ್ದೇಶಕ ರಾಜೀವ್ ತಿಳಿಸಿದ್ದಾರೆ.