ಹೈದರಾಬಾದ್(ತೆಲಂಗಾಣ): ಸಂಸದ ಜೆ. ಸಂತೋಷ್ ಕುಮಾರ್ ಆರಂಭಿಸಿದ್ದ ಗ್ರೀನ್ ಇಂಡಿಯಾ ಚಾಲೆಂಜ್ ಅಭಿಯಾನವನ್ನು ಈಗಾಗಲೇ ಅನೇಕ ಸೆಲಬ್ರಿಟಿಗಳು ಪೂರ್ಣಗೊಳಿಸಿದ್ದಾರೆ. ಇದೀಗ ಆರ್ಆರ್ಆರ್ ಚಿತ್ರತಂಡ ಕೂಡಾ ಈ ಚಾಲೆಂಜ್ ಸ್ವೀಕರಿಸಿ ಪೂರ್ಣಗೊಳಿಸಿದೆ. ಬಹುನಿರೀಕ್ಷಿತ ಚಿತ್ರ "RRR" ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಚಿತ್ರದ ನಿರ್ದೇಶಕ ರಾಜಮೌಳಿ ಮತ್ತು ನಾಯಕರಾದ ಜೂನಿಯರ್ ಎನ್ಟಿಆರ್, ರಾಮ್ ಚರಣ್ ಬುಧವಾರ ಹೈದರಾಬಾದ್‌ನಲ್ಲಿ ನಡೆದ ಗ್ರೀನ್ ಇಂಡಿಯಾ ಚಾಲೆಂಜ್‌ನಲ್ಲಿ ಭಾಗವಹಿಸಿದ್ದರು.
ಈ ಮೂವರು ಸಂಸದ ಜೆ.ಸಂತೋಷ್ ಕುಮಾರ್ ಅವರೊಂದಿಗೆ ಬುಧವಾರ ಗಚ್ಚಿಬೌಲಿಯಲ್ಲಿ ಸಸಿಗಳನ್ನು ನೆಟ್ಟರು. ರೌದ್ರಂ - ರಣಂ - ರುಧಿರಂ ಅನ್ನು ಸೂಚಿಸುವ "ಆರ್ಆರ್ಆರ್" ನಾಳೆ ತೆರೆ ಮೇಲೆ ಅಪ್ಪಳಿಸಲಿದೆ. ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ದೇಶಾದ್ಯಂತ ಪ್ರವಾಸ ಕೈಗೊಂಡಿದ್ದು, ನಿನ್ನೆ ಹೈದರಾಬಾದ್‌ನಲ್ಲಿ ಸದ್ದು ಮಾಡಿದೆ. ಈ ಸಂದರ್ಭದಲ್ಲಿ ನಿರ್ದೇಶಕ ರಾಜಮೌಳಿ ಮಾತನಾಡಿ, ಪ್ರಕೃತಿ ಮತ್ತು ಪರಿಸರ ತಮ್ಮ ನೆಚ್ಚಿನ ಚಟುವಟಿಕೆಯಾಗಿದ್ದು, ಸಾಧ್ಯವಾದಾಗಲೆಲ್ಲ ಸಿಬ್ಬಂದಿಯೊಂದಿಗೆ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದರು. ಈ ವೇಳೆ, ಗ್ರೀನ್ ಇಂಡಿಯಾ ಚಾಲೆಂಜ್‌ನಲ್ಲಿ "ಬಾಹುಬಲಿ" ತಂಡ ಭಾಗವಹಿಸಿದ್ದನ್ನು ನೆನಪಿಸಿಕೊಂಡರು.
ಇದನ್ನೂ ಓದಿ: ಇದೇ 25ಕ್ಕೆ ಬಹು ನಿರೀಕ್ಷಿತ RRR ರಿಲೀಸ್; ಥಿಯೇಟರ್ ಪರದೆ ಮುಂದೆ ಮುಳ್ಳುತಂತಿ ಬೇಲಿ ಅಳವಡಿಕೆ..!
ಪ್ರತಿಯೊಬ್ಬ ನಾಗರಿಕರು ಪರಿಸರದಲ್ಲಿನ ಬದಲಾವಣೆಗಳನ್ನು ಅರಿತು ಸಸಿಗಳನ್ನು ನೆಡುವ ಮೂಲಕ ಹಸಿರನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಜೂನಿಯರ್ ಎನ್ಟಿಆರ್ ಹೇಳಿದರು. ಇನ್ನೂ ರಾಮ್ ಚರಣ್ ಮಾತನಾಡಿ, ಮತ್ತೊಮ್ಮೆ ಗ್ರೀನ್ ಇಂಡಿಯಾ ಚಾಲೆಂಜ್‌ನಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು. ಇನ್ನೂ ಸಾಮಾಜಿಕ ಒಳಿತಿನ ಗುರಿಯೊಂದಿಗೆ ದೇಶಾದ್ಯಂತ ಹಸಿರೀಕರಣ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ ಸಂಸದ ಸಂತೋಷ್ ಕುಮಾರ್ ಅವರನ್ನು ಚಿತ್ರ ತಂಡ ಶ್ಲಾಘಿಸಿತು.