ರೂಪಾರಾವ್ ನಿರ್ದೇಶನದ ‘ಗಂಟುಮೂಟೆ’ ಕನ್ನಡ ಸಿನಿಮಾಗೆ ನ್ಯೂಯಾರ್ಕ್ ಫಿಲಂ ಫೆಸ್ಟಿವಲ್ನಲ್ಲಿ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಲಭಿಸಿದೆ. ಈ ಚಿತ್ರ ಕೆನಡಾ ಫಿಲಂ ಅವಾರ್ಡ್ ಕಾರ್ಯಕ್ರಮದಲ್ಲೂ ಪ್ರದರ್ಶನಗೊಂಡಿದೆ. ಖ್ಯಾತ ನಟಿ ಸೀಮಾ ಬಿಸ್ವಾಸ್ ಹಾಗೂ ಆದಿಲ್ ಹುಸೈನ್ ಮುಂತಾದವರಿಂದ ಪ್ರಶಂಸೆ ಗಳಿಸಿರುವ ಈ ಸಿನಿಮಾ ಈಗ ಆಸ್ಟ್ರೇಲಿಯಾಗೆ ಹೋಗಲು ಗಂಟುಮೂಟೆ ಕಟ್ಟಿದೆ.
ಇಂಡಿಯನ್ ಫಿಲಂ ಫೆಸ್ಟಿವಲ್ ಆಫ್ ಮೆಲ್ಬೋರ್ನ್ನಲ್ಲಿ ಆಸ್ಟ್ರೇಲಿಯನ್ ಪ್ರೀಮಿಯರ್ಗೆ ಆಯ್ಕೆಗೊಂಡ ಈ ವರ್ಷದ ಏಕೈಕ ಕನ್ನಡ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗೆಯೇ ಇಟಲಿಯ ರೋಮ್ನಲ್ಲಿ ನಡೆಯುವ ಸೋಷಿಯಲ್ ವರ್ಲ್ಡ್ ಫಿಲಂ ಫೆಸ್ಟಿವಲ್ನಲ್ಲಿ ಯಂಗ್ ಇಂಡಿಪೆಂಡೆಂಟ್ ಸಿನಿಮಾ ಆ ದಿ ವರ್ಲ್ಡ್ ವಿಭಾಗದಲ್ಲಿ ಆಯ್ಕೆಯಾಗಿರುವ ಏಕೈಕ ಕನ್ನಡ ಸಿನಿಮಾ ಇದಾಗಿದೆ. ಪ್ರಪಂಚದ ಸುತ್ತಲೂ ಸದ್ದು ಮಾಡಿ ಕನ್ನಡ ಚಲನಚಿತ್ರಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡುತ್ತಿರುವ 'ಗಂಟುಮೂಟೆ' ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.
'ಅಮೆಯುಕ್ತಿ ಸ್ಟುಡಿಯೋಸ್' ನಿರ್ಮಿಸಿರುವ 'ಗಂಟುಮೂಟೆ' ಚಿತ್ರದ ತಾರಾಗಣದಲ್ಲಿ ತೇಜು ಬೆಳವಾಡಿ (ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರ ಪುತ್ರಿ ಮತ್ತು ನಟಿ ಭಾರ್ಗವಿ ನಾರಾಯಣ್ ಅವರ ಮೊಮ್ಮಗಳು) ಹಾಗೂ ನಿಶ್ಚಿತ್ ಕೊರೋಡಿ ಇದ್ದಾರೆ. ಯುವತಿ ದೃಷ್ಟಿಕೋನದಲ್ಲಿ ಹೆಣೆದ ನವಿರಾದ, ನೈಜ ಹಾಗೂ ಅಷ್ಟೇ ತೀವ್ರತೆಯಿಂದ ಕೂಡಿದ ಭಾವನೆಯ ತುಡಿತಗಳ ಸಮ್ಮಿಲನ ಚಿತ್ರದಲ್ಲಿದೆ. ಕನ್ನಡದ ಮಟ್ಟಿಗೆ ಈ ರೀತಿಯ ಪ್ರಯತ್ನ ಅತಿ ವಿರಳ ಎನ್ನಬಹುದು. ಚಿತ್ರದ ಟೀಸರ್ಗಳು ಕೂಡಾ ಎಲ್ಲರ ಮೆಚ್ಚುಗೆ ಗಳಿಸಿದೆ.