ಕನ್ನಡದ ಧೀರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮೂರು ದಶಕಗಳಿಂದ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಸಿನಿಮಾಗಳನ್ನು ಮಾಡುತ್ತಾ ಬಂದಿದ್ದಾರೆ. ಹಿಂದಿಯಲ್ಲಿ ಸಲ್ಮಾನ್ ಖಾನ್ ಜೊತೆ ‘ಭಜರಂಗಿ ಭಾಯ್ ಜಾನ್’, ತಮಿಳಿನಲ್ಲಿ ರಜನಿಕಾಂತ್ ತಾರಾಗಣದ ‘ಲಿಂಗಾ’ ಹೀಗೆ ದೊಡ್ಡ ಮಟ್ಟದ ಸಿನಿಮಾಗಳಲ್ಲಿ ಕೆಲಸ ಮಾಡಿರುವ ರಾಕ್ ಲೈನ್ ಮೊದಲ ಬಾರಿಗೆ ವೃತ್ತಿ ಜೀವನದಲ್ಲಿ ಪಶ್ಚಾತಾಪ ಪಟ್ಟುಕೊಂಡಿದ್ದಾರೆ.
ಕೊರೊನಾ ವೈರಸ್, ಲಾಕ್ ಡೌನ್ ನಿಂದಾಗಿ ಕಳೆದ ನಾಲ್ಕು ತಿಂಗಳಿಂದ ಚಿತ್ರರಂಗಕ್ಕೆ ಪೆಟ್ಟು ಬಿದ್ದಿದ್ದು, ಜೊತೆಗೆ ಈ ವರ್ಷದ ಕೊನೆಯವರೆಗೂ ದೊಡ್ಡ ಸಿನಿಮಾಗಳು ಪುನಾರಂಭ ಆಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಈ ಕೊರೊನಾ ವೈರಸ್ನಿಂದ ಇಷ್ಟೊಂದು ತೊಂದರೆ ಆಗುತ್ತದೆ ಎಂದು ತಿಳಿದಿದ್ದರೆ, ‘ರಾಜ ವೀರ ಮದಕರಿ ನಾಯಕ’ ಅಂತಹ ದೊಡ್ಡ ಬಜೆಟ್ ನ ಸಿನಿಮಾವನ್ನು ನಾನು ಪ್ರಾರಂಭಿಸುತ್ತಲೇ ಇರಲಿಲ್ಲ ಎಂದು ರಾಕ್ ಲೈನ್ ವೆಂಕಟೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ರಾಕ್ ಲೈನ್ ವೆಂಕಟೇಶ್ ಶಿಸ್ತಿಗೆ ಹೆಸರಾದವರು. ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿಸಿರುವ ‘ರಾಜ ವೀರ ಮದಕರಿ ನಾಯಕ’ ಸಿನಿಮಾ ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿರುವುದಕ್ಕೆ ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ.
ಹೆಸರಾಂತ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ನಟ ದರ್ಶನ್ ಮುಂತಾದವರು ಈ ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ್ದು, ಸದ್ಯಕ್ಕೆ ‘ರಾಜ ವೀರ ಮದಕರಿ ನಾಯಕ’ ಉತ್ತರ ಭಾರತದ ಕೆಲವು ಅರಮನೆಗಳನ್ನು ಆಯ್ಕೆ ಮಾಡಿಕೊಂಡು ಚಿತ್ರೀಕರಣಕ್ಕೆ ಕಾಯುತ್ತಿದೆ. ಚಿತ್ರದುರ್ಗದಲ್ಲಿ ಸಹ ಪ್ರಮುಖ ಘಟ್ಟಗಳಲ್ಲಿ ಚಿತ್ರೀಕರಣ ಆಗಬೇಕಿದೆ.