ಬಾಲಿವುಡ್ ಚಿತ್ರರಂಗಕ್ಕೆ ಆಘಾತದ ಮೇಲೆ ಆಘಾತವಾಗುತ್ತಿದೆ. ನಿನ್ನೆಯಷ್ಟೇ ಇರ್ಫಾನ್ ಖಾನ್ ನಮ್ಮನ್ನೆಲ್ಲಾ ಅಗಲಿದರೆ ಇಂದು ರಿಷಿ ಕಪೂರ್ ಕೂಡಾ ನಿಧನರಾದರು. ಈ ಸುದ್ದಿ ಬಾಲಿವುಡ್ ಚಿತ್ರರಂಗಕ್ಕೆ ಬರಸಿಡಿಲಿನಂತೆ ಬಡಿದಿದೆ. ಇಬ್ಬರು ಪ್ರತಿಭಾನ್ವಿತ ನಟರನ್ನು ಕಳೆದುಕೊಂಡು ಬಾಲಿವುಡ್ ಚಿತ್ರರಂಗ ದು:ಖ ವ್ಯಕ್ತಪಡಿಸಿದೆ.
ರಿಷಿ ಕಪೂರ್ ತಂದೆ ರಾಜ್ ಕಪೂರ್, ತಾತ ಪೃಥ್ವಿ ರಾಜ್ ಕಪೂರ್. ಇವರಿಗೆ ಕನ್ನಡ ಚಿತ್ರರಂಗದೊಂದಿಗೆ ಒಳ್ಳೆ ಬಾಂಧವ್ಯ ಇತ್ತು. 1971 ರಲ್ಲಿ. ರಾಜ್ ಕುಮಾರ್ ಅಭಿನಯದ 'ಸಾಕ್ಷ್ಯಾತ್ಕಾರ' ಸಿನಿಮಾದಲ್ಲಿ, ರಿಷಿ ಕಪೂರ್ ತಾತ ಪೃಥ್ವಿ ರಾಜ್ ಕಪೂರ್ ನಟಿಸಿದ್ದರು. ಪುಟ್ಟಣ್ಣ ಕಣಗಾಲ್ ಈ ಚಿತ್ರವನ್ನು ನಿರ್ದೇಶಿಸಿದ್ದರು.
ಇನ್ನು ರಿಷಿ ಕಪೂರ್ ತಂದೆ ರಾಜ್ ಕಪೂರ್ ಕೂಡಾ ಕನ್ನಡ ಚಿತ್ರರಂಗದ ಜೊತೆ ಒಳ್ಳೆ ನಂಟು ಹೊಂದಿದ್ದರು. ಆಶ್ಚರ್ಯಕರ ಸಂಗತಿ ಅಂದ್ರೆ ರಾಜ್ ಕಪೂರ್ ಕಷ್ಟದ ದಿನಗಳಲ್ಲಿ, ಕನ್ನಡ ಚಿತ್ರರಂಗ ಅವರ ಕೈ ಹಿಡಿದಿತ್ತು. 1970 ರಲ್ಲಿ ರಾಜ್ ಕಪೂರ್ 'ಮೇರಾ ನಾಮ್ ಜೋಕರ್' ಎಂಬ ಸಿನಿಮಾ ಮಾಡಿದ್ದರು. ಮುಂಬೈನಲ್ಲಿ ಈ ಸಿನಿಮಾ ಫ್ಲಾಪ್ ಆಗುವ ಆಗುವ ಮೂಲಕ ಸಾಕಷ್ಟು ನಷ್ಟ ಅನುಭವಿಸಿದ್ರು.
ಆದರೆ ಕರ್ನಾಟಕದಲ್ಲಿ 'ಮೇರಾ ನಾಮ್ ಜೋಕರ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಕಾರಣ ಈ ಸಿನಿಮಾದ ವಿತರಣೆ ಪಡೆದಿದ್ದ ಡಿಸ್ಟ್ರಿಬ್ಯೂಟರ್ಗಳು. ಈ ಸಿನಿಮಾದಲ್ಲಿ ಕೆಲವು ಬೇಡದ ದೃಶ್ಯಗಳನ್ನು ತೆಗೆದು, ಕನ್ನಡದಲ್ಲಿ ರಿಲೀಸ್ ಮಾಡಿದ್ದರಿಂದ, ಮುಂಬೈನಲ್ಲಿ ಸೋಲು ಕಂಡ 'ಮೇರಾ ನಾಮ್ ಜೋಕರ್' ಚಿತ್ರ ಕರ್ನಾಟಕದಲ್ಲಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಿಂದ ಬಂದ ಲಾಭದಲ್ಲಿ ವಿತರಕರು ರಾಜ್ಕಪೂರ್ ಅವರಿಗೆ ಒಂದು ಲಕ್ಷ ರೂಪಾಯಿ ನೀಡಿದ್ದರಂತೆ. ಇನ್ನು ಅದೇ ದೃಶ್ಯಗಳನ್ನು ಮತ್ತೆ ಹಿಂದಿಯಲ್ಲಿ ತೆಗೆದು ರೀ ರಿಲೀಸ್ ಮಾಡಿದ್ದಾಗ ಮುಂಬೈನಲ್ಲಿ ಕೂಡಾ ಈ ಸಿನಿಮಾ ದೊಡ್ಡ ಹಿಟ್ ಆಯ್ತಂತೆ.
ಇಷ್ಟೇ ಅಲ್ಲ, ಇಂದು ರಿಷಿ ಕಪೂರ್ ಪುತ್ರ ರಣಬೀರ್ ಕಪೂರ್ ಸಿನಿಮಾಗಳು ಕರ್ನಾಟಕದಲ್ಲಿ ಸಕ್ಸಸ್ ಆಗುತ್ತಿದೆ. ಇದರಿಂದ ರಿಷಿ ಕಪೂರ್ ಕುಟುಂಬಕ್ಕೆ ಕರ್ನಾಟಕದೊಂದಿಗೆ ಇದ್ದ ನಂಟು ಎಷ್ಟು ಎಂದು ತಿಳಿಯುತ್ತದೆ.
ಇನ್ನು ರಿಷಿ ಕಪೂರ್ ಜೊತೆ ರೆಬಲ್ ಸ್ಟಾರ್ ಅಂಬರೀಶ್ ಬಹಳ ಆತ್ಮೀಯ ಗೆಳೆತನ ಹೊಂದಿದ್ದರು. ಕನ್ನಡದ 'ನಾಗರಹಾವು' ಚಿತ್ರ ಹಿಂದಿಗೆ ರಿಮೇಕ್ ಆಗುವ ಮೂಲಕ ರಿಷಿ ಕಪೂರ್ ಹಾಗೂ ಅಂಬಿ ನಡುವೆ ಒಳ್ಳೆ ಸ್ನೇಹ ಬೆಳೆಯಿತು. 1974ರಲ್ಲಿ 'ಜಹ್ರೀಲ್ ಇನ್ಸಾನ್' ಎಂಬ ಹೆಸರಿನಲ್ಲಿ ಈ ಸಿನಿಮಾ ಮುಂಬೈನಲ್ಲಿ ರಿಲೀಸ್ ಆಗಿತ್ತು.ಈ ಚಿತ್ರವನ್ನು ಹಿಂದಿಯಲ್ಲಿ ಕೂಡಾ ಪುಣ್ಣಟ್ಟ ಅವರೇ ನಿರ್ದೇಶನ ಮಾಡಿದ್ದರು.
ಈ ಚಿತ್ರದಲ್ಲಿ ವಿಷ್ಣುವರ್ಧನ್ ಪಾತ್ರವನ್ನು ರಿಷಿ ಕಪೂರ್ ಮಾಡಿದ್ದರು. ಆದರೆ ಜಲೀಲನ ಪಾತ್ರವನ್ನು ಹಿಂದಿಯಲ್ಲಿ ಕೂಡಾ ಅಂಬರೀಶ್ ಅವರೇ ಅಭಿನಯಿಸಿದ್ದರು. ಅಲ್ಲಿಂದ ರಿಷಿ ಕಪೂರ್ ಹಾಗೂ ಅಂಬರೀಶ್ ಸ್ನೇಹ ಶುರುವಾಗಿತ್ತು. ರಿಷಿ ಕಪೂರ್ ಬೆಂಗಳೂರಿಗೆ ಬಂದಾಗ ಅಂಬರೀಶ್ ಅವರನ್ನು ತಪ್ಪದೆ ಭೇಟಿ ಮಾಡುತ್ತಿದ್ದರಂತೆ. ಅಂಬರೀಶ್ ಕೂಡಾ ಬಾಂಬೆಗೆ ಹೋದಾಗ ರಿಷಿ ಕಪೂರ್ ಅವರನ್ನು ಭೇಟಿ ಮಾಡುತ್ತಿದ್ದರಂತೆ. ಇಬ್ಬರೂ ಜೊತೆಯಾಗಿ ಕುಳಿತು ಮದ್ಯ ಸೇವಿಸುವಷ್ಟು ಅವರಿಬ್ಬರ ನಡುವೆ ಸ್ನೇಹ ಇತ್ತು ಎನ್ನುತ್ತಾರೆ ಅಂಬರೀಶ್ ಆಪ್ತರು.
ಅಂಬರೀಶ್ ಮಾತ್ರವಲ್ಲ ವಿಷ್ಣುವರ್ಧನ್ ಜೊತೆಗೂ ರಿಷಿ ಕಪೂರ್ ಅವರಿಗೆ ಒಳ್ಳೆಯ ಸ್ನೇಹವಿತ್ತು ಎನ್ನಲಾಗಿದೆ. ಆದರೆ ಈ ಮೂವರೂ ದಿಗ್ಗಜರು ಇಂದು ನಮ್ಮೊಂದಿಗೆ ಇಲ್ಲ ಎನ್ನುವುದು ಬೇಸರದ ಸಂಗತಿ.