ನಿನ್ನೆ 'ಲವ್ ಯೂ ರಚ್ಚು' ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್ ಅವಘಡ ಸಂಭವಿಸಿ ಫೈಟರ್ ಸಾವನ್ನಪ್ಪಿದ ಘಟನೆ ಜಿಲ್ಲೆಯ ಬಿಡದಿಯ ಜೋಗಿನದೊಡ್ಡಿ ಬಳಿ ನಡೆದಿದೆ.
ತಮಿಳುನಾಡು ಮೂಲದ ಫೈಟರ್ ವಿವೇಕ್ (28) ಮೃತ ವ್ಯಕ್ತಿ. ಅಜಯ್ ರಾವ್ ಮತ್ತು ರಚಿತಾ ರಾಮ್ ನಟನೆಯ ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಶಾರ್ಟ್ ಸರ್ಕ್ಯೂಟ್ನಿಂದ ಇಬ್ಬರಿಗೆ ಗಾಯವಾಗಿತ್ತು. ಇದರಲ್ಲಿ ವಿವೇಕ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ಈ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿರುವ ನಟ ಅಜಯ್ ರಾವ್ "ಫೈಟರ್ ವಿವೇಕ್ ಕುಟುಂಬಕ್ಕೆ ಪರಿಹಾರ ಕೊಡುತ್ತೇವೆ" ಎಂದು ಹೇಳಿದ್ದಾರೆ.
ಸಿನಿಮಾ ಚಿತ್ರೀಕರಣದ ವೇಳೆ, ನಟನಿಗೆ ಗಾಯ ಆಗೋದು, ಸಹ ಕಲಾವಿದರ ಸಾವು ಅನ್ನೋದು ಕನ್ನಡ ಚಿತ್ರರಂಗಕ್ಕೆ ಒಂದು ಶಾಪವಾಗಿದೆ. ‘ಮಾಸ್ತಿಗುಡಿ’ ಸಿನಿಮಾದ ದೊಡ್ಡ ದುರಂತದ ಬಳಿಕ, ಈಗ ಅಜಯ್ ರಾವ್ ಮತ್ತು ರಚಿತಾ ರಾಮ್ ಅಭಿನಯದ ಲವ್ ಯೂ ರಚ್ಚು ಸಿನಿಮಾದ, ಚಿತ್ರೀಕರಣ ವೇಳೆ ಫೈಟರ್ ವಿವೇಕ್ ತಾನು ಮಾಡಿರದ ತಪ್ಪಿಗೆ ಜೀವ ಬಿಟ್ಟಿದ್ದಾರೆ.
'ದುರಂತ ನಡೆದಾಗ ನಾನು ಸ್ವಲ್ಪ ದೂರದಲ್ಲಿದ್ದೆ':
ಈ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿರುವ ನಟ ಅಜಯ್ ರಾವ್, ಈ ಘಟನೆ ಹೇಗೆ ಆಯಿತು ಅನ್ನೋದು ನನಗೆ ಗೊತ್ತಿಲ್ಲ. ಯಾಕೆಂದರೆ ಸಾಹಸ ನಿರ್ದೇಶಕ ವಿನೋದ್, ನಾನು ಮಾಡಬೇಕಿದ್ದ ಆಕ್ಷನ್ ಸಿಕ್ವೇನ್ಸ್ ಮಾಡಿದ ಬಳಿಕ ಬ್ರೇಕ್ ಕೊಟ್ಟಿದ್ದರು. ನಾನು ಶೂಟಿಂಗ್ನಿಂದ ಸ್ವಲ್ಪ ದೂರದಲ್ಲಿ ಇದ್ದೆ. ಫೈಟರ್ ವಿವೇಕ್ಗೆ ಏಟು ಆಗಿದೆ ಅನ್ನೋದನ್ನು ನನ್ನ ಸಿಬ್ಬಂದಿ ಬಂದು ಹೇಳಿದರು. ಅಲ್ಲಿಯವರೆಗೂ ನನಗೆ ಗೊತ್ತಾಗಲಿಲ್ಲ ಎಂದರು.
ಕೂಡಲೇ ಚಿತ್ರತಂಡದ ಸಿಬ್ಬಂದಿ ವಿವೇಕ್ ಅವರನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದರು. ಸ್ವಲ್ಪ ಹೊತ್ತಿನಲ್ಲೇ ಸಿನಿಮಾ ಶೂಟಿಂಗ್ ಸ್ಥಳಕ್ಕೆ ಪೊಲೀಸರು ಬರುತ್ತಾರೆ ಅಂತ ಗೊತ್ತಾದಾಗಲೇ, ನನಗೆ ಅನಿಸಿದ್ದು ದೊಡ್ಡ ಸಮಸ್ಯೆ ಆಗಿದೆ ಅಂತ. ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ಬಂದು, ನಿರ್ದೇಶಕ ಶಂಕರ್ ರಾಜ್ ಹಾಗೂ ಸಾಹಸ ನಿರ್ದೇಶಕ ವಿನೋದ್ ಅವರನ್ನು ಕರೆದುಕೊಂಡು ಹೋದರು ಎಂದು ಹೇಳಿದರು.
ನಮ್ಮ ಸಿನಿಮಾ ತಂಡದವರು ಹೇಳುವ ಹಾಗೆ, ಮೇಲಿಂದ ವಿವೇಕ್ ಬಿದ್ದು ತಲೆಗೆ ಪೆಟ್ಟಾಯಿತಂತೆ. ಇನ್ನು ಒಬ್ಬ ನಿರ್ದೇಶಕ ಹಾಗೂ ಸಾಹಸ ನಿರ್ದೇಶಕ ಏನು ಮಾಡ್ತಾ ಇದ್ದೀರಾ ಅಂತಾ ನಾವು ಕೇಳೋದಕ್ಕೆ ಆಗಲ್ಲ. ಯಾಕೆಂದರೆ ಅವರದ್ದೇ ಆದ ಕ್ರಿಯೇಟಿವಿಟಿ ಇರುತ್ತೆ. ಆಮೇಲೆ ನಮಗೆ ಯಾಕೆ ಹೀಗೆ ಅಂತಾ ಪ್ರಶ್ನೆ ಮಾಡೋದಿಕ್ಕೆ ಬರೋದಿಲ್ಲ ಅಂತಾ ಅಜಯ್ ರಾವ್ , ನಿರ್ದೇಶಕ ಶಂಕರ್ ಹಾಗು ಸಾಹಸ ನಿರ್ದೇಶಕ ವಿನೋದ್ ಕೆಲಸದ ಬಗ್ಗೆ ಹೇಳಿದರು.
ದುರಂತದಲ್ಲಿ ಸಾವನ್ನಪ್ಪಿರುವ ವಿವೇಕ್ ಕುಟುಂಬಕ್ಕೆ ನಮ್ಮ ಚಿತ್ರತಂಡ ನಿರ್ಮಾಪಕರ ಜೊತೆ ಚರ್ಚೆ ಮಾಡಿ ಪರಿಹಾರ ಕೊಡಿಸುತ್ತೇವೆ ಎಂದು ತಿಳಿಸಿದರು.
ಓದಿ : ಸಿನಿಮಾ ಶೂಟಿಂಗ್ ವೇಳೆ ಶಾರ್ಟ್ ಸರ್ಕ್ಯೂಟ್: 'ಲವ್ ಯೂ ರಚ್ಚು' ಸಿನಿಮಾ ಫೈಟರ್ ಸಾವು