ರೆಬೆಲ್ ಸ್ಟಾರ್ ಅಭಿನಯದ ‘ಅಂತ‘ ಸಿನಿಮಾ ಯಾರಿಗೆ ನೆನಪಿಲ್ಲ..? ಆ ಸಿನಿಮಾದ ‘ಕುತ್ತೇ ಕನ್ವರ್ ನಹಿ... ಕನ್ವರ್ ಲಾಲ್ ಬೋಲೋ‘ ಡೈಲಾಗ್ ಇಂದಿಗೂ ಫೇಮಸ್. ಇದೀಗ ಅಂತ ಸಿನಿಮಾ ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ಬಿಡುಗಡೆಯಾಗಲಿದೆ.
- " class="align-text-top noRightClick twitterSection" data="">

ಡಾ. ರಾಜ್ ಅಭಿನಯದ ಸತ್ಯ ಹರಿಶ್ಚಂದ್ರ, ಕಸ್ತೂರಿ ನಿವಾಸ, ಡಾ. ವಿಷ್ಣುವರ್ಧನ್ ಅಭಿನಯದ ನಾಗರಹಾವು ಸಿನಿಮಾಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ರಿಲೀಸ್ ಮಾಡಲಾಗಿತ್ತು. ಈಗ ‘ಅಂತ‘ ಸರದಿ. ರೆಬೆಲ್ ಸ್ಟಾರ್ಗೆ ಗೌರವ ಸಲ್ಲಿಸುವ ಸಲುವಾಗಿ ‘ಅಂತ‘ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡಲಾಗುತ್ತಿದೆ. ಈ ಸಿನಿಮಾ ಎಸ್.ವಿ. ರಾಜೇಂದ್ರಸಿಂಗ್ ಬಾಬು ನಿರ್ದೇಶನದಲ್ಲಿ 1980ರಲ್ಲಿ ಬಿಡುಗಡೆಯಾಗಿತ್ತು. ನಟಿ ಲಕ್ಷ್ಮಿ, ಅಂಬರೀಶ್ಗೆ ನಾಯಕಿಯಾಗಿ ಹಾಗೂ ಹಿರಿಯ ನಟಿ ಪಂಡರೀಬಾಯಿ ತಾಯಿಯಾಗಿ ಅಭಿನಯಿಸಿದ್ದರು. ಸಿನಿಮಾದ ‘ಪ್ರೇಮವಿದೆ ಮನದೆ‘ ಹಾಡು ಕೂಡಾ ಇಂದಿಗೂ ಎಲ್ಲರ ಮೋಸ್ಟ್ ಫೇವರೆಟ್. ಸಿನಿಮಾದಲ್ಲಿ ಅಂಬರೀಶ್ ಕೈದಿ ಕನ್ವರ್ ಲಾಲ್ ಹಾಗೂ ಇನ್ಸ್ಪೆಕ್ಟರ್ ಸುಶೀಲ್ ಕುಮಾರ್ ಎಂಬ ದ್ವಿಪಾತ್ರದಲ್ಲಿ ಅಭಿನಯಿಸಿದ್ದರು.

ಹೆಚ್.ಕೆ.ಅನಂತ್ ರಾವ್ ಕಾದಂಬರಿ ಆಧರಿಸಿದ ಈ ಚಿತ್ರ ಪರಿಮಳ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿತ್ತು. ಹೆಚ್.ಎನ್. ಮಾರುತಿ ಹಾಗೂ ವೇಣುಗೋಪಾಲ್ ನಿರ್ಮಿಸಿದ್ದ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸು ಸಹ ಕಂಡಿತ್ತು.ಚಿತ್ರದ ಹಾಡುಗಳಿಗೆ ಜಿ.ಕೆ.ವೆಂಕಟೇಶ್ ಸಂಗೀತ ನೀಡಿದ್ದರು. ಇದೀಗ ಚಿತ್ರ ಡಿಜಿಟಲ್ ತಂತ್ರಜ್ಞಾನದೊಂದಿಗೆ ಮತ್ತೆ ತಯಾರಾಗುತ್ತಿದೆ. ಪಿ.ಎಸ್ ಪ್ರಕಾಶ್ ‘ಅಂತ’ ಚಿತ್ರದ ಛಾಯಾಗ್ರಾಹಕರು.
ಲಹರಿ ಆಡಿಯೋ ಸಂಸ್ಥೆ ಸಿನಿಮಾದ ಹಾಡುಗಳ ಹಕ್ಕು ಹೊಂದಿದೆ. ದೀಪಕ್ ಪಿಕ್ಚರ್ಸ್ ಹಾಗೂ ಶ್ರೀನಿವಾಸ ಪಿಕ್ಚರ್ಸ್ (ಗದಗ) ಜೊತೆ ಸೇರಿ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ. ಜಯಮಾಲ, ಲತಾ, ವಜ್ರಮುನಿ, ಪ್ರಭಾಕರ್, ಸುಂದರ ಕೃಷ್ಣ ಅರಸ್, ಶಕ್ತಿ ಪ್ರಸಾದ್, ಲಕ್ಷ್ಮಣ್, ಸಿ. ಸೀತಾರಾಂ ಹಾಗೂ ಇನ್ನಿತರರು ಈ ಚಿತ್ರದ ತಾರಾಬಳಗದಲ್ಲಿ ಇದ್ದಾರೆ.