ದುನಿಯಾ ವಿಜಯ್ ಅಭಿನಯದ ಜಯಮ್ಮನ ಮಗ ಚಿತ್ರ ನಿರ್ದೇಶನ ಮಾಡಿದ್ದ ವಿಕಾಸ್ ಮೊದಲ ಬಾರಿಗೆ ನಾಯಕ ನಟರಾಗಿ ನಟಿಸಿರುವ 'ಕಾಣದಂತೆ ಮಾಯವಾದನು' ಚಿತ್ರ ರಿಲೀಸ್ಗೆ ರೆಡಿಯಾಗಿದ್ದು, ಜನವರಿ 31ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ವಿತರಕ ಜಯಣ್ಣ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದಾರೆ. ಇನ್ನು ಈ ಚಿತ್ರಕ್ಕೆ ರಾಜ್ ಪತ್ತಿಪಾಟಿ ನಿರ್ದೇಶನ ಮಾಡಿದ್ದು, ನಾಯಕಿಯಾಗಿ ಸಿಂಧು ಲೋಕನಾಥ್ ನಟಿಸಿದ್ದಾರೆ.
ಸೆಟ್ಟೀರಿದ ನಾಲ್ಕು ವರ್ಷಗಳ ನಂತರ ಈ ಸಿನಿಮಾ ಬಿಡುಗಡೆ ಭಾಗ್ಯ ಕಾಣುತ್ತಿದೆ. ಚಿತ್ರದಲ್ಲಿ ಅತೃಪ್ತ ಆತ್ಮಗಳ ರಂಪಾಟವನ್ನು ನಿರ್ದೇಶಕರು ಹೇಳಲು ಹೊರಟಿದ್ದಾರೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಶ್ವಾನಗಳ ಕಣ್ಣಿಗೆ ದೆವ್ವಗಳು ಕಾಣಿಸುತ್ತದೆ ಎಂಬ ನಂಬಿಕೆಯಿದೆ. ಈ ನಂಬಿಕೆಯನ್ನಿಟ್ಟುಕೊಂಡು ನಿರ್ದೇಶಕರು ಕಥೆ ಹೆಣೆದಿದ್ದಾರೆ.
ಸಿನಿಮಾದಲ್ಲಿ ಧರ್ಮಣ್ಣ, ಅಚ್ಯುತ್, ಭಜರಂಗ ಲೋಕಿ ನಟಿಸಿದ್ದಾರೆ. ವಿಶೇಷ ಏನಂದ್ರೆ ವಿಧಿವಶರಾಗಿರುವ ನಟ ಉದಯ್ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರಂತೆ. ಈ ಚಿತ್ರದಲ್ಲಿ ಖಳ ನಟನ ಪಾತ್ರದಲ್ಲಿ ಉದಯ್ ನಟಿಸಿದ್ದು, ಸಿನಿಮಾ ಬಿಡುಗಡೆಗೆ ಮುನ್ನ ಅವರು ಸಾವನ್ನಪ್ಪಿದ್ದರಿಂದ ಅವರ ಮುಂದುವರೆದ ಪಾತ್ರದಲ್ಲಿ ಭಜರಂಗಿ ಲೋಕಿ ನಟಿಸಿದ್ದಾರೆ.