ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತ ರಾಮ್ ಇದೀಗ ಶಬರಿಯಾಗಲು ಹೊರಟ್ಟಿದ್ದಾರೆ. ‘ಶಬರಿ-ಸರ್ಚಿಂಗ್ ಫಾರ್ ರಾವಣ’ ಎಂಬ ಚಿತ್ರದಲ್ಲಿ ನಟಿಸುತ್ತಿರುವುದು ಈ ಹಿಂದೆಯೇ ಖಚಿತವಾಗಿತ್ತು. ಅಷ್ಟೇ ಅಲ್ಲ, ರಾಮ ನವಮಿಯಂದೇ ಚಿತ್ರದ ಫಸ್ಟ್ಲುಕ್ ಪೋಸ್ಟರ್ ಸಹ ಬಿಡುಗಡೆಯಾಗಿ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ, ಚಿತ್ರೀಕರಣ ಆರಂಭವಾಗಬೇಕು ಎನ್ನುವಷ್ಟರಲ್ಲಿ ಲಾಕ್ಡೌನ್ ಘೋಷಣೆಯಾಗಿತ್ತು.
ಇದೀಗ ಅನ್ಲಾಕ್ ನಿಯಮದಡಿ ಚಿತ್ರೀಕರಣಕ್ಕೂ ಅವಕಾಶ ನೀಡಲಾಗಿದ್ದು, ಶಬರಿ ಚಿತ್ರದ ಮುಹೂರ್ತ ನಡೆದಿದೆ. ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಮುಹೂರ್ತ ನೆರವೇರಿದೆ. ಈ ಚಿತ್ರವು ಹೆಸರೇ ಹೇಳುವಂತೆ ಮಹಿಳಾ ಪ್ರಧಾನವಾಗಿರಲಿದೆ. ರಚಿತಾ ಶಬರಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ರಘು ಮುಖರ್ಜಿ ಪಾತ್ರದ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿಲ್ಲ.
ಕೆ.ಕೆ ಪ್ರೊಡಕ್ಷನ್ಸ್ ಹಾಗೂ ಎಟಿಎಂ ಸ್ಟುಡಿಯೋಸ್ ಮೂಲಕ ಕಿರಣ್ ಕುಮಾರ್, ಅರವಿಂದ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನವೀನ್ ಶೆಟ್ಟಿ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇದಕ್ಕೂ ಮುನ್ನ ಸಂಕಲನಕಾರರಾಗಿದ್ದ ನವೀನ್, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಕೇಶವ್-ಚೇತನ್ ಈ ಚಿತ್ರದ ಕಥೆ ಮತ್ತು ಚಿತ್ರಕಥೆಯ ಜವಾಬ್ದಾರಿ ಹೊತ್ತಿದ್ದಾರೆ.
ಇದು ರಚಿತಾ ರಾಮ್ ಅಭಿನಯದ 36ನೇ ಚಿತ್ರವಾಗಿದ್ದು, ಅವರೊಂದಿಗೆ ಅಚ್ಯುತ್ಕುಮಾರ್, ಪ್ರತಾಪ್ ನಾರಾಯಣ್, ಅರ್ಚನಾ ಕೊಟ್ಟಿಗೆ ಮುಂತಾದವರು ನಟಿಸುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ಮತ್ತು ವಿಶಾಲ್ ಕುಮಾರ್ ಛಾಯಾಗ್ರಹಣವಿರುವ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ.