1980 ರಲ್ಲಿ ಬಿಡುಗಡೆಯಾದ ಡಾ. ರಾಜ್ಕುಮಾರ್ ಅಭಿನಯದ 'ರವಿಚಂದ್ರ' ಸಿನಿಮಾ ಹೆಸರನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಸ ಸಿನಿಮಾಗೆ ಶೀರ್ಷಿಕೆಯನ್ನಾಗಿ ಇಡಲಾಗಿತ್ತು. ಆದರೆ ಈಗ ಚಿತ್ರದ ಹೆಸರು ಬದಲಾಗಿದೆ.
ಹಳೆಯ ಸಿನಿಮಾಗಳ ಹೆಸರು ಮತ್ತೆ ರಿಪೀಟ್ ಆಗುವುದು ಬೇಡ ಎಂದು ಸ್ಯಾಂಡಲ್ವುಡ್ನಲ್ಲಿ ಕೆಲವರು ಫಿಲ್ಮ್ ಚೇಂಬರ್ನಲ್ಲಿ ಮನವಿ ಮಾಡುತ್ತಿದ್ದಾರೆ. ಆದ್ದರಿಂದ ಈ ಚಿತ್ರಕ್ಕೆ ಇದೀಗ 'ವೇದ ವ್ಯಾಸ' ಎಂದು ಫೈನಲ್ ಮಾಡಲಾಗಿದೆ.
ಕನಕಪುರ ಶ್ರೀನಿವಾಸ್ ನಿರ್ಮಾಣದ ಈ ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಉಪ್ಪಿ ಹಾಗೂ ರವಿಚಂದ್ರನ್ ಜೊತೆ ಶಾನ್ವಿ ಶ್ರೀವಾತ್ಸವ್ ಹಾಗೂ ನಿಮಿಕಾ ರತ್ನಾಕರ್ ನಟಿಸುತ್ತಿದ್ದಾರೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರೆ ಎಂದು ಚಿತ್ರದ ಶೂಟಿಂಗ್ ಆರಂಭವಾದಾಗ ನಿರ್ದೇಶಕ ಓಂ ಪ್ರಕಾಶ್ ರಾವ್ ಮಾಹಿತಿ ನೀಡಿದ್ದರು. ರವಿ ಆಗಿ ರವಿಚಂದ್ರನ್, ಚಂದ್ರ ಆಗಿ ಉಪೇಂದ್ರ ಕೆಲವು ದಿನಗಳ ಕಾಲ ಚಿತ್ರೀಕರಣ ಕೂಡಾ ಮಾಡಿದ್ದರು. ಇದು ರವಿಚಂದ್ರನ್ ಹಾಗೂ ಉಪೇಂದ್ರ ಜೊತೆಯಾಗಿ ನಟಿಸುತ್ತಿರುವ ಮೊದಲ ಸಿನಿಮಾ.
'ವೇದ ವ್ಯಾಸ' ಓಂ ಪ್ರಕಾಶ್ ರಾವ್ ನಿರ್ದೇಶನದ 47ನೇ ಸಿನಿಮಾ. 2013 ರಲ್ಲಿ ಬಿಡುಗಡೆ ಆದ 'ಬಲುಪು' ತೆಲುಗು ಚಿತ್ರದ ಶೇ. 60 ರಷ್ಟು ಕಥೆಯನ್ನು ಈ ಚಿತ್ರಕ್ಕೆ ಅಳವಡಿಸಿಕೊಳ್ಳಲಾಗುತ್ತಿದೆ. ಉಳಿದ ಭಾಗ ಉಪೇಂದ್ರ ಹಾಗೂ ರವಿಚಂದ್ರನ್ ಇಬ್ಬರ ಇಮೇಜ್ಗೆ ತಕ್ಕಂತೆ ಚಿತ್ರೀಕರಣ ಮಾಡಲಾಗುತ್ತಿದೆ. ಚಿತ್ರದಲ್ಲಿ ಇಬ್ಬರೂ ವಿರುದ್ಧ ದಿಕ್ಕಿನಲ್ಲಿ ಯೋಚಿಸುವ ಸಹೋದರರ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.
ಇನ್ನು ನಿರ್ಮಾಪಕ ಕನಕಪುರ ಶ್ರೀನಿವಾಸ್, ಕಳೆದ 14 ವರ್ಷಗಳಿಂದ ರವಿಚಂದ್ರನ್ ಹಾಗೂ ಉಪೇಂದ್ರ ಇಬ್ಬರನ್ನು ಸೇರಿಸಿ ಒಂದು ಸಿನಿಮಾ ಮಾಡಬೇಕು ಎಂದು ಕನಸು ಕಂಡಿದ್ದರಂತೆ. ಅವರ ಆಸೆ ಈಗ ನೆರವೇರುತ್ತಿದೆ. ಈ ಚಿತ್ರದ ಶೂಟಿಂಗ್ 2018 ಆಗಸ್ಟ್ನಲ್ಲಿ ಆರಂಭವಾಗಿ ಕುಂಟುತ್ತಾ ಸಾಗಿದೆ. ಇದೀಗ ಸರ್ಕಾರ ಚಿತ್ರೀಕರಣ ಆರಂಭಿಸಲು ಅನುಮತಿ ನೀಡಿರುವುದರಿಂದ ಬಾಕಿ ಇರುವ ಚಿತ್ರೀಕರಣ ಆರಂಭವಾಗಬೇಕಿದೆ.