ಸಂಗೀತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಸಕಲಕಲಾವಲ್ಲಭ ಚಂದನ್ ಶೆಟ್ಟಿ ಪುಟ್ಟ ಮಕ್ಕಳಿಗೆ ಕೂಡಾ ಗೊತ್ತು. ಸಂಗೀತ ನಿರ್ದೇಶಕ, ರ್ಯಾಪರ್, ನಟ, ಗಾಯಕ, ಗೀತರಚನೆಕಾರ, ಗಿಟಾರ್ ವಾದಕ, ಡ್ರಮ್ಮರ್ ಹೀಗೆ ಸಕಲ ಕಲೆಗಳನ್ನು ತನ್ನೊಳಗೆ ಹುದುಗಿಸಿಕೊಂಡಿರುವ ಚಂದನ್ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

ಹಾಸನದ ಈ ಯುವಪ್ರತಿಭೆ, ಸಂಗೀತದಲ್ಲಿ ವಿಶೇಷ ಒಲವು ಹೊಂದಿರುವ ಚಂದನ್ ಶೆಟ್ಟಿ 'ಅಲೆಮಾರಿ' ಚಿತ್ರದಿಂದ ಗೀತರಚನೆಕಾರ ಮತ್ತು ಸಹಾಯಕ ಸಂಗೀತ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಈ ಸಿನಿಮಾಗೆ ಅರ್ಜುನ್ ಜನ್ಯಾ ಪ್ರಮುಖ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಈ ಸಿನಿಮಾ ಮೂಲಕ ಆರಂಭವಾದ ಚಂದನ್ ಶೆಟ್ಟಿ ಸಂಗೀತ ಜೀವನ ಮುಂದೆ ವರದನಾಯಕ, ಪವರ್, ಚಕ್ರವ್ಯೂಹ ಮತ್ತು ಭಜರಂಗಿ ಸಿನಿಮಾಗಳಿಗೂ ಕೆಲಸ ಮಾಡುವಂತಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ರ್ಯಾಪರ್ ಎಂದೇ ಪರಿಚಿತವಾಗಿರುವ ಚಂದನ್ ಶೆಟ್ಟಿ ಅಪ್ಪುಗೆ, ಸೀಸರ್, ಗಾಂಚಲಿ, ಸಂಜೀವ, ಜೋಶ್ಲೆ ಧ್ವನಿಮುದ್ರಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. 2 ಪೆಗ್, ಚಾಕೊಲೇಟ್ ಗರ್ಲ್, ಟಕಿಲಾ, ನನ್ನ ಪ್ರೀತಿ ಸುಳ್ಳಲ್ಲ, ಬೆಂಕಿ ಎಂಬ ಆಲ್ಬಂ ಹಾಡುಗಳ ಮೂಲಕ ಸಂಗೀತ ಪ್ರಿಯರಿಗೆ ಹಾಡಿನ ರಸದೌತಣವನ್ನು ಉಣಬಡಿಸಿರುವ ಚಂದನ್ ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5 ರ ವಿಜೇತರೂ ಹೌದು.

ಇದರ ಜೊತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಾಸ್ಟರ್ ಡಾನ್ಸರ್ ರಿಯಾಲಿಟಿ ಶೋ ತೀರ್ಪುಗಾರರಾಗಿ ಕಾಣಿಸಿಕೊಂಡ ಚಂದನ್, ಕಲರ್ಸ್ ಸೂಪರ್ ವಾಹಿನಿಯ ಕನ್ನಡ ಕೋಗಿಲೆಯ ಎರಡು ಸೀಸನ್ಗಳಲ್ಲಿ ತೀರ್ಪುಗಾರರಾಗಿ ಮಿಂಚಿದ್ದರು. ಇದೀಗ 'ಕನ್ನಡ ಕೋಗಿಲೆ ಸೂಪರ್ ಸೀಸನ್' ತೀರ್ಪುಗಾರರಾಗಿ ಬ್ಯುಸಿಯಾಗಿರುವ ಚಂದನ್ ಶೆಟ್ಟಿ ಹುಟ್ಟುಹಬ್ಬಕ್ಕೆ ಸ್ನೇಹಿತರು, ಚಿತ್ರರಂಗದ ಗಣ್ಯರು ಶುಭ ಕೋರಿದ್ದಾರೆ.
