ಗೀತಾ ಬ್ಯಾಂಗಲ್ ಸ್ಟೋರ್ನಲ್ಲಿ ನಾಯಕ, ಪ್ರೀಮಿಯರ್ ಪದ್ಮಿನಿ ಸಿನಿಮಾದಲ್ಲಿ ಜಗ್ಗೇಶ್ ಕಾರ್ ಡ್ರೈವರ್ ನಂಜುಂಡಿ ಆಗಿ ನಟಿಸಿದ್ದ ಪ್ರಮೋದ್ ಇದೀಗ 'ಮತ್ತೆ ಉದ್ಭವ' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.
ಏನಿದು ಉದ್ಭವ ಅಂತೀರಾ..? 1990ರಲ್ಲಿ ಕೋಡ್ಲು ರಾಮಕೃಷ್ಣ ನಿರ್ದೇಶನದಲ್ಲಿ 'ಉದ್ಭವ' ಎಂಬ ಸಿನಿಮಾ ಬಂದಿತ್ತು. 29 ವರ್ಷಗಳ ನಂತರ ಆ ಚಿತ್ರಕ್ಕೆ ಸೀಕ್ವೆಲ್ ಭಾಗ್ಯ ಸಿಕ್ಕಿದೆ. ಕೆಲವು ದಿನಗಳ ಹಿಂದೆ ಈ ಸಿನಿಮಾ ಸೆಟ್ಟೇರಿದೆ. ಸದ್ಯ 'ಲವ್ ಮೊಕ್ಟೇಲ್', 'ಓಹ್' ಸಿನಿಮಾಗಳಲ್ಲಿ ತೊಡಗಿಕೊಂಡಿರುವ ಮಿಲನ 'ಮತ್ತೆ ಉದ್ಭವ'ದಲ್ಲಿ ಪ್ರಮೋದ್ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಫೋಟೋಶೂಟ್ನ ಕೆಲವೊಂದು ಪೋಟೋಗಳನ್ನು ಚಿತ್ರತಂಡ ರಿವೀಲ್ ಮಾಡಿದೆ. ಈ ಫೋಟೋಶೂಟ್ನಲ್ಲಿ ಪ್ರಮೋದ್ ಹಿರಿಯ ಹಾಸ್ಯ ನಟ ರಂಗಾಯಣ ರಘು ಜೊತೆ ಮುಗ್ಧ ಹುಡುಗನಾಗಿ ಕಂಡರೆ, ಮಿಲನ ಪ್ರಕಾಶ್ ಜೊತೆ ಲವರ್ ಬಾಯ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಮೋಹನ್ ಕೂಡಾ ಈ ಸಿನಿಮಾದಲ್ಲಿ ಜ್ಯೋತಿಷಿ ಪಾತ್ರದಲ್ಲಿ ನಟಿಸಿದ್ದಾರೆ.
