ಇತ್ತೀಚಿನ ದಿನಗಳಲ್ಲಿ ಹಳೆಯ ಸಿನಿಮಾಗಳ ಟೈಟಲನ್ನು ಹೊಸ ಸಿನಿಮಾಗಳಿಗೆ ಬಳಸುವುದು ಸಾಮಾನ್ಯವಾಗಿದೆ. ಇದೀಗ ನಿರ್ದೇಶಕ ದಯಾಳ್ ಪದ್ಮನಾಭನ್ 'ರಂಗನಾಯಕಿ' ಸಿನಿಮಾ ಹೆಸರನ್ನು ತಮ್ಮ ಹೊಸ ಸಿನಿಮಾ ಟೈಟಲ್ ಆಗಿ ಬಳಸಿಕೊಂಡಿದ್ದಾರೆ.

ಈ ಸಿನಿಮಾ ಕಥೆ ದಯಾಳ್ ಅವರದ್ದೇ ಆಗಿದ್ದು, ಇಂದು 'ರಂಗನಾಯಕಿ' ಕಾದಂಬರಿ ಬಿಡುಗಡೆ ಹಾಗೂ ಚಿತ್ರದ ಮುಹೂರ್ತ ಸಮಾರಂಭ ಏರ್ಪಡಿಸಲಾಗಿತ್ತು. ಚಿತ್ರದ ಮೊದಲ ಪೋಸ್ಟರನ್ನು ಇಂದು ಬಿಡುಗಡೆ ಮಾಡಲಾಗಿದೆ. ಹಾಗೇ 'ರಂಗನಾಯಕಿ' ಟೈಟಲ್ ಕೆಳಗೆ ವಾಲ್ಯೂಮ್ 1-ವರ್ಜಿನಿಟಿ ಎಂಬ ಟ್ಯಾಗ್ಲೈನ್ ಇರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಪೋಸ್ಟರ್ ಚಿತ್ರದ ಮೇಲೆ ಭಾರೀ ಕುಹೂಹಲ ಹುಟ್ಟಿಸಿದೆ.

ಇನ್ನು ಅಧಿತಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದು ಪುಣ್ಣಣ್ಣ ಕಣಗಾಲ್ ಚಿತ್ರದಲ್ಲಿ ಆರತಿ ರಂಗನಾಯಕಿಯಾಗಿ ಗಮನ ಸೆಳೆದಿದ್ದರು. ಈ ರಂಗನಾಯಕಿಯಲ್ಲಿ ಅಧಿತಿ ಪ್ರಭುದೇವ ರಂಗನಾಯಕಿಯಾಗಿ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದಾರೆ.

ಶ್ರೀನಿವಾಸ ಕಲ್ಯಾಣ ಸಿನಿಮಾದ ಶ್ರೀನಿ ಹಾಗೂ ತ್ರಿವಿಕ್ರಮ್ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 'ಹಗ್ಗದ ಕೊನೆ', 'ಆ ಕರಾಳ ರಾತ್ರಿ', 'ಪುಟ 109' ಹಾಗೂ 'ತ್ರಯಂಬಕಂ' ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿರುವ ದಯಾಳ್ ಈಗ 'ರಂಗನಾಯಕಿ' ಕಥೆ ಹೇಳುತ್ತಿದ್ದಾರೆ. ಎಸ್.ವಿ. ನಾರಾಯಣ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಪೋಸ್ಟರ್ ಈ ಮಟ್ಟಿಗೆ ಸೆನ್ಸೇಷನ್ ಸೃಷ್ಟಿ ಮಾಡಿದೆ ಎಂದರೆ ಚಿತ್ರದ ಕಥೆ ಹೇಗಿರಬಹುದು ಎಂಬುದು ಈಗ ಚರ್ಚಾ ವಿಷಯವಾಗಿದೆ.