ಸ್ಯಾಂಡಲ್ವುಡ್ನಲ್ಲಿ ಟೈಟ್ಲ್ನಿಂದಲೇ ಸದ್ದು ಮಾಡುತ್ತಿರುವ ರೆಟ್ರೋ ಸಿನಿಮಾ ರಂಗಸಮುದ್ರ. ಸದ್ಯ ಸಿನಿಮಾದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇದೀಗ ಡಬ್ಬಿಂಗ್ನಲ್ಲಿ ಬ್ಯುಸಿಯಾಗಿದೆ. ಚಿತ್ರದ ಮುಖ್ಯಭೂಮಿಕೆಯಲ್ಲಿರುವ ಬಹುಭಾಷಾ ನಟ ಸಂಪತ್ ರಾಜ್, ರಂಗಾಯಣ ರಘು, ಕಾರ್ತಿಕ್, ಉಗ್ರಂ ಮಂಜು ಮತ್ತು ನಾಯಕಿ ದಿವ್ಯ ಡಬ್ಬಿಂಗ್ ಮನೆಯಲ್ಲಿ ಬ್ಯುಸಿಯಾಗಿದ್ದಾರೆ.
2-3 ದಶಕಗಳ ಹಿಂದಿನ ಮಾನವೀಯ ಸೆಲೆಯ ಗ್ರಾಮೀಣ ಕಥಾ ವಸ್ತುವನ್ನು ರಂಗಸಮುದ್ರ ಚಿತ್ರದಲ್ಲಿ ಅನಾವರಣಗೊಳಿಸಲಾಗಿದೆ. ರಾಜಕುಮಾರ್ ಅಸ್ಕಿ ಈ ಚಿತ್ರದ ನಿರ್ದೇಶಕರು. ಇದು ಇವರ ನಿರ್ದೇಶನದ ಚೊಚ್ಚಲ ಚಿತ್ರ. ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಊರೊಂದರ ಹೆಸರು ರಂಗ ಸಮುದ್ರ. ಈ ಊರಿನ ಹೆಸರೇ ಈಗ ಚಿತ್ರದ ಶೀರ್ಷಿಕೆಯಾಗಿದೆ.
ಕಲ್ಯಾಣ ಕರ್ನಾಟಕದ ಜವಾರಿ ಭಾಷೆ, ಕರಾವಳಿ, ಮೈಸೂರು ಕರ್ನಾಟಕ ಭಾಗದ ಸಂಭಾಷಣೆಯ ಸೊಗಸು ಚಿತ್ರದಲ್ಲಿದೆ. ಭಾಷಾ ವೈವಿದ್ಯತೆಯ ಜುಗಲ್ ಬಂದಿ ಜೊತೆಗೆ ಭಾಂದವ್ಯದ ಬೆಸುಗೆಯ ಕಥಾ ಹಂದರ ಚಿತ್ರದ ಹೈಲೈಟ್ ಆಗಿದೆ. ಚಿತ್ರೀಕರಣ ಕೂಡ ಮೈಸೂರು, ಬೆಂಗಳೂರು, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ವಿವಿಧ ಪ್ರದೇಶಗಳು ಮತ್ತು ಮಹಾರಾಷ್ಟ್ರದ ಗಡಿಭಾಗದಲ್ಲಿ ನಡೆಸಲಾಗಿದೆ.
ಹೊಯ್ಸಳ ಕ್ರಿಯೇಷನ್ಸ್ ಲಾಂಛನದಲ್ಲಿ ಹೊಯ್ಸಳ ಕೊಣನೂರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಐದು ಹಾಡುಗಳಿರುವ ರಂಗಸಮುದ್ರ ಚಿತ್ರಕ್ಕೆ ದೇಸಿ ಮೋಹನ್ ಸಂಗೀತ ನೀಡುತ್ತಿದ್ದಾರೆ. ಆರ್ ಗಿರಿ ಛಾಯಾಗ್ರಹಣ, ಶ್ರೀಕಾಂತ್ (ಕೆಜಿಎಫ್) ಸಂಕಲನ, ವಾಗೀಶ್ ಚನ್ನಗಿರಿ ಗೀತ ಸಾಹಿತ್ಯ ಹಾಗೂ ಧನಂಜಯ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಇದನ್ನೂ ಓದಿ: ಅನಂತ್ ನಾಗ್ ಕರ್ನಾಟಕದ ಹೆಮ್ಮೆ: ನಟ ಯಶ್