ಚಿತ್ರರಂಗಕ್ಕೆ ಹೊಸಬರ ಆಗಮನ ಇಂದು ನಿನ್ನೆಯದಲ್ಲ. ಎಷ್ಟೋ ಪ್ರತಿಭೆಗಳು ನಟರಾಗುವ ಕನಸು ಕಟ್ಟಿಕೊಂಡು ಪ್ರತಿದಿನ ಗಾಂಧಿನಗರಕ್ಕೆ ಆಗಮಿಸುತ್ತಾರೆ. ಇದೀಗ ಕನಕಪುರದ ಹುಡುಗನೊಬ್ಬ 'ಆವರ್ತ' ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ಧಾರೆ.
ಕನಕಪುರದ ಧನ್ವಿತ್ ಎಂಬ ಪ್ರತಿಭೆ 'ಆವರ್ತ' ಚಿತ್ರದಲ್ಲಿ ಸಿಐಡಿ ಅಧಿಕಾರಿಯಾಗಿ ಅಭಿನಯಿಸಿದ್ಧಾರೆ. ಮಡಿಕೇರಿ ಹಾಗೂ ಸುತ್ತಮುತ್ತ ಬಹುತೇಕ ಮಾತಿನ ಭಾಗದ ಚಿತ್ರೀಕರಣ ಜರುಗಿದೆ. ಸದ್ಯಕ್ಕೆ ಹಾಡುಗಳ ಚಿತ್ರೀಕರಣ ನಡೆಯುತ್ತಿದೆ. ಧನ್ವಿತ್ ಜೊತೆ ಮತ್ತೊಬ್ಬ ನಾಯಕ ಜೈ ವಿಜಯ್ ನಟಿಸುತ್ತಿದ್ದು ಈತ ಬರಹಗಾರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಸಿನಿಮಾ.
1985 ರಲ್ಲಿ ಬಿಡುಗಡೆಯಾದ 'ತುಳಸೀ ದಳ' ಚಿತ್ರದ ನಿರ್ದೇಶಕ ವೇಮಗಲ್ ಜಗನ್ನಾಥ್ ರಾವ್ ಆವರ್ತ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಶಿವರಾಮ್, ನಯನ, ಮೇಘಶ್ರೀ ಗೌಡ, ಕಲ್ಲೇಶ್ ಹಾಗೂ ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಎರಡು ಹಾಡುಗಳಿಗೆ ಅತಿಶಯ್ ಜೈನ್ ಸಂಗೀತ ನೀಡಿದ್ಧಾರೆ. ಮಲ್ಲಿಕಾರ್ಜುನ್ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ಈ ಚಿತ್ರಕ್ಕಿದೆ.
ಜಗನ್ನಾಥ್ ರಾವ್ ಹಾಗೂ ಗೆಳೆಯರು ಸೇರಿ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಆಗಸ್ಟ್ 25 ರಂದು ಧನ್ವಿತ್ ಹುಟ್ಟುಹಬ್ಬಕ್ಕೆ ಈ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎನ್ನಲಾಗಿದೆ.