ಐನ್ಸ್ಟೈನ್ನಂತ ಮಹಾನ್ ವಿಜ್ಞಾನಿ ವಿಜ್ಞಾನ ಕ್ಷೇತ್ರಕ್ಕೆ ದೊಡ್ಡ ಆಸ್ತಿ. ಒಂದು ವೇಳೆ ಐನ್ಸ್ಟೈನ್ನಂತ ವ್ಯಕ್ತಿಗಳು ಹಳ್ಳಿಗಳಲ್ಲಿ ಹುಟ್ಟಿ ಬೆಳೆದು ಹಳ್ಳಿಯಲ್ಲೇ ಇದ್ದಿದ್ದರೆ ಏನಾಗುತ್ತಿತ್ತು ಎಂಬ ಪರಿಕಲ್ಪನೆಯೊಂದಿಗೆ ಕನ್ನಡದಲ್ಲಿ ಸಿನಿಮಾವೊಂದು ತಯಾರಾಗುತ್ತಿದ್ದು ಶೀಘ್ರದಲ್ಲೇ ಚಿತ್ರ ತೆರೆಕಾಣುತ್ತಿದೆ.
'ರಾಮಾಚಾರಿ 2.0' ಎಂಬ ಸಿನಿಮಾವನ್ನು ನಟ ತೇಜು ಡಿಫರೆಂಟ್ ಜೋನರ್ನಲ್ಲಿ ಮಾಡಲು ಹೊರಟಿದ್ದು ಇಂದು ಚಿತ್ರದ ಮೊದಲ ಲುಕ್ ಬಿಡುಗಡೆ ಆಗಿದೆ. ಈ ಚಿತ್ರಕ್ಕಾಗಿ ತೇಜು ಫೋಟೋಶೂಟ್ ಮಾಡಿಸಿದ್ದಾರೆ. ಓಂ ಚಿತ್ರಕ್ಕೆ ಫೋಟೋ ಶೂಟ್ ಮಾಡಿದ್ದ ಪ್ರವೀಣ್ ನಾಯಕ್ ಈ ಚಿತ್ರಕ್ಕೆ ಕೂಡಾ ಪೋಟೊಶೂಟ್ ಮಾಡಿದ್ದಾರೆ. ಈ ಚಿತ್ರಕ್ಕಾಗಿ ತೇಜು ಸಾಕಷ್ಟು ಹೋಂ ವರ್ಕ್ ಮಾಡಿದ್ದು ನಿರ್ದೇಶನದ ಜೊತೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಚಿತ್ರಕ್ಕೆ ಹಣವನ್ನು ಹೂಡುತ್ತಿದ್ದಾರೆ.
ಸದ್ಯ ಚಿತ್ರ ಪ್ರೀ ಪ್ರೋಡಕ್ಷನ್ ಕೆಲಸದಲ್ಲಿ ಬ್ಯುಸಿ ಇದ್ದು ಶೀಘ್ರದಲ್ಲೇ ತಂತ್ರಜ್ಞರು ಹಾಗೂ ನಟನಟಿಯರ ವಿವರ ಹೇಳುವುದಾಗಿ ತೇಜು ಹೇಳಿದ್ದಾರೆ. ತೇಜು, ನಟ ಸುಂದರ್ ರಾಜ್ ಅವರ ಸಂಬಂಧಿಯಾಗಿದ್ದು, ಈ ಹಿಂದೆ 'ರಿವೈಂಡ್' ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ ಆ್ಯಕ್ಟ್ ಕೂಡಾ ಮಾಡಿದ್ದಾರೆ. ಗೂಗಲ್ನಂತ ದೈತ್ಯ ಕಂಪನಿಯ ಉದ್ಯೋಗ ಬಿಟ್ಟು ಚಿತ್ರರಂಗದಲ್ಲಿ ಸಾಧಿಸಲೇಬೇಕು ಎಂದು ಗಾಂಧಿ ನಗರಕ್ಕೆ ಬಂದಿರುವ ತೇಜುಗೆ 'ರಾಮಾಚಾರಿ' ಕೈ ಹಿಡಿಯುತ್ತಾನಾ ಎಂಬುದನ್ನು ಕಾದು ನೋಡಬೇಕು.