ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಕನ್ನಡ ಚಿತ್ರರಂಗದಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ಅನೇಕ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅಂತ, ಸಿಂಹದಮರಿ ಸೈನ್ಯ, ಭರ್ಜರಿ ಭೇಟೆ, ಮುತ್ತಿನ ಹಾರ, ಬಂಧನ, ಕರ್ಣದಂಥ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ.
ಸುಮಾರು 4 ದಶಕಗಳ ಕಾಲ ನಿರ್ದೇಶನದಲ್ಲಿ ಪಳಗಿರುವ ರಾಜೇಂದ್ರ ಸಿಂಗ್ ಬಾಬು ಬಹಳ ವರ್ಷಗಳ ನಂತರ ಇದೀಗ ದರ್ಶನ್ ಅಭಿನಯದ 'ರಾಜವೀರ ಮದಕರಿ ನಾಯಕ' ಚಿತ್ರದ ಮೂಲಕ ಮತ್ತೆ ಆ್ಯಕ್ಷನ್ ಕಟ್ ಹೇಳಲು ಬಂದಿದ್ದಾರೆ. ಇದಕ್ಕೂ ಮುನ್ನ ಉಪೇಂದ್ರ ಹಾಗೂ ರಮ್ಯ ಅಭಿನಯದ 'ಭೀಮೂಸ್ ಬ್ಯಾಂಗ್ ಬ್ಯಾಂಗ್' ಮಕ್ಕಳ ಸಿನಿಮಾ ಅರ್ಧಕ್ಕೆ ನಿಂತಿದೆ. ಉಪೇಂದ್ರ ಅವರ 'ದಿ ಹಿಂದೂ', 'ಗೌಡನ ಆನೆ' ಪ್ರಾಜೆಕ್ಟ್ ಕೂಡಾ ಆರಂಭವಾಗಿಲ್ಲ. 'ರಾಜವೀರ ಮದಕರಿ ನಾಯಕ' ಚಿತ್ರದೊಂದಿಗೆ ದರ್ಶನ್ ಜೊತೆ ರಾಜೇಂದ್ರ ಸಿಂಗ್ ಬಾಬು ಮತ್ತೊಂದು ಬಿಗ್ ಬಜೆಟ್ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ.
ತಮ್ಮದೇ 'ಮಹಾತ್ಮ ಪಿಕ್ಚರ್ಸ್' ಬ್ಯಾನರ್ ಅಡಿಯಲ್ಲಿ 100 ನೇ ಸಿನಿಮಾವನ್ನಾಗಿ ಈ ಹೊಸ ಚಿತ್ರವನ್ನು ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ರಾಜೇಂದ್ರ ಸಿಂಗ್ ಬಾಬು ಅವರು ಈ ಚಿತ್ರದಲ್ಲಿ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರನ್ನು ಅರಣ್ಯ ಇಲಾಖೆ ಅಧಿಕಾರಿಯನ್ನಾಗಿ ತೋರಿಸಲು ಪ್ಲ್ಯಾನ್ ಮಾಡಿದ್ದಾರೆ. ಭಾರತ, ಆಫ್ರಿಕಾ, ಹಾಂಗ್ಕಾಂಗ್ನಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಲಾಗಿದೆ.
ಕನ್ನಡದಲ್ಲಿ ಈಗಾಗಲೇ ಡಾ. ರಾಜ್ಕುಮಾರ್, ಡಾ. ವಿಷ್ಣುವರ್ಧನ್, ಡಾ. ಅಂಬರೀಶ್, ಟೈಗರ್ ಪ್ರಭಾಕರ್, ಶಿವರಾಜ್ಕುಮಾರ್ ಎಲ್ಲರೂ ಕಾಡು, ಪ್ರಾಣಿಗಳಿಗೆ ಸಂಬಂಧಿಸಿದ ಸಿನಿಮಾಗಳನ್ನು ಮಾಡಿದ್ದಾರೆ. ಎಂ.ಪಿ. ಶಂಕರ್ ಅವರ 'ಭರಣಿ ಚಿತ್ರ' ಬ್ಯಾನರ್ ಅಡಿ ಕಾಡು ಹಾಗೂ ಪ್ರಾಣಿಗಳ ಬಹುತೇಕ ಸಿನಿಮಾಗಳು ತಯಾರಾಗಿವೆ. ಈಗ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರು ಆಫ್ರಿಕಾದಂತ ಕಾಡಿನ ಸುತ್ತ ಹೆಣೆದಿರುವ ಚಿತ್ರಕಥೆಯನ್ನು ರೆಡಿ ಮಾಡಿಕೊಂಡಿದ್ದಾರೆ. ಚಿತ್ರದ ಒನ್ ಲೈನ್ ಸ್ಟೋರಿ ಕೇಳಿ ದರ್ಶನ್ ಈ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.
'ರಾಜವೀರ ಮದಕರಿ ನಾಯಕ' ಸಿನಿಮಾ ಸೇರಿ ದರ್ಶನ್ ಮೂರು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಅದರಲ್ಲಿ ದರ್ಶನ್ ಸಹೋದರ ದಿನಕರ್ ತೂಗುದೀಪ್ ಅವರ 'ಸರ್ವಾಂತರ್ಯಾಮಿ ' ಕೂಡಾ ಸೇರಿದೆ. ಈ ಮೂರೂ ಸಿನಿಮಾಗಳು ಮುಗಿದ ನಂತರ ರಾಜೇಂದ್ರ ಸಿಂಗ್ ಬಾಬು ಅವರ ಹೊಸ ಸಿನಿಮಾ ಆರಂಭವಾಗಲಿದೆ.