ಚೆನ್ನೈ (ತಮಿಳುನಾಡು): ಸೂಪರ್ ಸ್ಟಾರ್ ರಜನಿಕಾಂತ್ ಸದ್ಯಕ್ಕೆ ಪಕ್ಷ ಸ್ಥಾಪನೆ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಈ ಬಗ್ಗೆ ‘ದೇವರ ಎಚ್ಚರಿಕೆಯ ಕರೆ’ಯನ್ನು ಅವರು ಉಲ್ಲೇಖಿಸಿದ್ದು, ಆರೋಗ್ಯ ಕಾರಣಗಳನ್ನು ನೀಡಿ ರಾಜಕೀಯ ಪಕ್ಷ ಪ್ರಾರಂಭಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ರಕ್ತದೊತ್ತಡದ ಏರಿಳಿತದಿಂದಾಗಿ ರಜನಿಕಾಂತ್ ಹೈದರಾಬಾದ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದರು. ಒಂದೆರಡು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ವೈದ್ಯರು ಸಲಹೆ ನೀಡಿದ್ದರಿಂದ ಭಾನುವಾರ ಚೆನ್ನೈಗೆ ಮರಳಿದರು.
ಓದಿ: ತೆಲುಗು ನಟ ರಾಮ್ ಚರಣ್ಗೂ ಕೊರೊನಾ ಸೋಂಕು...
ಈ ಬಗ್ಗೆ ಟ್ವೀಟ್ ಮಾಡಿರುವ ರಜನಿಕಾಂತ್, ‘ನನ್ನ ಇತ್ತೀಚಿನ ಆರೋಗ್ಯ ಸಮಸ್ಯೆಯನ್ನು ದೇವರ ಎಚ್ಚರಿಕೆಯೆಂದು ನಾನು ಪರಿಗಣಿಸುತ್ತೇನೆ. ಇತ್ತೀಚೆಗೆ ಸಿನಿಮಾ ಶೂಟಿಂಗ್ ವೇಳೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ನಾವು ಪಾಲಿಸಿದ್ದೆವು. ಆದರೂ ಕೊರೊನಾ ಸೋಂಕು ನಮ್ಮ ಚಿತ್ರತಂಡಕ್ಕೆ ಮುಳುವಾಯಿತು. ಇದರಿಂದ ಸಿನಿಮಾ ಚಿತ್ರೀಕರಣವನ್ನು ಮುಂದೂಡಬೇಕಾಯಿತು. ನಮ್ಮ ಪ್ರೊಡಕ್ಷನ್ ಹೌಸ್ ಭಾರಿ ನಷ್ಟ ಎದುರಿಸಬೇಕಾಗಿದೆ. ಚುನಾವಣೆಗೆ ಸ್ಪರ್ಧಿಸಲು ಮತ್ತು ಹೋರಾಡಲು, ನಾನು ಪ್ರಚಾರಕ್ಕಾಗಿ ಲಕ್ಷಾಂತರ ಜನರನ್ನು ಭೇಟಿ ಮಾಡಬೇಕಾಗಿದೆ. ಒಂದು ರಾಜಕೀಯ ಪಕ್ಷ ಕೇವಲ ಒಂದು ಸಾಮಾಜಿಕ ಮಾಧ್ಯಮ ಅಭಿಯಾನದಲ್ಲಿ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ. ಹಾಗಾಗಿ ನಾನು ಪಾರ್ಟಿಯನ್ನು ಪ್ರಾರಂಭಿಸದಿರಲು ನಿರ್ಧರಿಸಿದ್ದೇನೆ. ಇದು ನನ್ನ ಅಭಿಮಾನಿಗಳಿಗೆ ದೊಡ್ಡ ನಿರಾಶೆಯ ಸುದ್ದಿಯಾಗಬಹುದು. ಆದರೆ ನಾನು ಬಹಳ ವಿಷಾದ ಮತ್ತು ನೋವಿನಿಂದ ಈ ವಿಚಾರವನ್ನು ಘೋಷಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.