ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್, ಖ್ಯಾತ ನಿರ್ದೇಶಕ ಎಸ್. ಶಂಕರ್ ಹಾಗೂ ನಟ ಚಿಯಾನ್ ವಿಕ್ರಮ್ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಸೆಲಬ್ರಿಟಿಗಳು. ಕೆಲವೊಂದು ಸಿನಿಮಾಗಳಿಗೆ ಈ ಮೂವರೂ ಸೇರಿ ಒಟ್ಟಿಗೆ ಕೆಲಸ ಕೂಡಾ ಮಾಡಿದ್ದಾರೆ. ಈ ಮೂರು ಅನೇಕ ಬಾರಿ ಒಟ್ಟಿಗೆ ಕೂಡಾ ಕಾಣಿಸಿಕೊಂಡಿದ್ದಾರೆ. ಆದರೆ ಇದೀಗ ಈ ಮೂವರೂ ಸೆಲಬ್ರಿಟಿಗಳ ಮಕ್ಕಳು ಜೊತೆಯಾಗಿ ಇರುವ ಫೋಟೋವೊಂದು ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ.
ಎ.ಆರ್. ರೆಹಮಾನ್ ಪುತ್ರ ಎ.ಆರ್. ಅಮೀನ್, ವಿಕ್ರಮ್ ಪುತ್ರ ಧ್ರುವ್ ವಿಕ್ರಮ್ ಹಾಗೂ ಶಂಕರ್ ಪುತ್ರ ಅರ್ಜಿತ್ ಮೂವರೂ ಒಟ್ಟಿಗೆ ಕುಳಿತಿರುವ ಫೋಟೋ ವೈರಲ್ ಆಗುತ್ತಿದೆ. ಇದನ್ನು ನೋಡಿದರೆ ಈ ಮೂವರೂ ಒಂದೇ ಸಿನಿಮಾಗಾಗಿ ಕೆಲಸ ಮಾಡುತ್ತಿರಬಹುದಾ ಎಂಬ ಅನುಮಾನ ಕಾಡುವುದು ಸಹಜ. ಒಂದು ವೇಳೆ ಇದು ನಿಜವಾದರೆ ಅಭಿಮಾನಿಗಳ ಬಹಳ ದಿನಗಳ ಕನಸು ನನಸಾದಂತಾಗುತ್ತದೆ. ಈಗಾಗಲೇ ಧ್ರುವ್ ವಿಕ್ರಮ್ 'ಆದಿತ್ಯ ವರ್ಮ' ಚಿತ್ರದ ಮೂಲಕ ತಮಿಳು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಕಾರ್ತಿಕ್ ಸುಬ್ಬರಾಜು ನಿರ್ದೇಶಿಸುತ್ತಿರುವ ವಿಕ್ರಮ್ 60 ನೇ ಸಿನಿಮಾದಲ್ಲಿ ತಂದೆ ಜೊತೆಗೆ ಧ್ರುವ್ ನಟಿಸುತ್ತಿದ್ದಾರೆ. ಇದರೊಂದಿಗೆ ಮಾರಿ ಸೆಲ್ವರಾಜ್ ನಿರ್ದೇಶನದ ಹೊಸ ಚಿತ್ರವೊಂದಕ್ಕೆ ಕೂಢಾ ಧ್ರುವ್ ಸಹಿ ಹಾಕಿದ್ದಾರೆ.
ಇದನ್ನೂ ಓದಿ: ಮೇಘನಾ ರಾಜ್ ಮಗುವಿಗೆ ಕೊರೊನಾ: ಘಾಟಿ ಸುಬ್ರಹ್ಮಣ್ಯಕ್ಕೆ ಭೇಟಿ ಕೊಟ್ಟ ಧ್ರುವ
ಎ.ಆರ್. ರೆಹಮಾನ್ ಪುತ್ರ ಎ.ಆರ್. ಅಮೀನ್ ತಂದೆ ಸಂಗೀತ ನಿರ್ದೇಶನದಲ್ಲಿ 'ಕಪಲ್ಸ್ ರೀಟ್ರೀಟ್' ಎಂಬ ಹಾಲಿವುಡ್ ಚಿತ್ರದ ಮೂಲಕ ಗಾಯಕರಾಗಿ ಕರಿಯರ್ ಆರಂಭಿಸಿದ್ದಾರೆ. ಇದರೊಂದಿಗೆ ಓ ಕಾದಲ್ ಕಣ್ಮಣಿ, 2.0 ಸೇರಿ ಇತರ ಸಿನಿಮಾಗಳಲ್ಲಿ ಕೂಡಾ ಹಾಡಿದ್ದಾರೆ. ಅಮೀನ್ ತಮ್ಮ 17ನೇ ವರ್ಷಕ್ಕೆ ಹಿನ್ನೆಲೆ ಗಾಯಕನಾಗಿ ಗುರುತಿಸಿಕೊಂಡಿದ್ದಾರೆ. ನಿರ್ದೇಶಕ ಶಂಕರ್ ಪುತ್ರ ಇದುವರೆಗೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿಲ್ಲವಾದರೂ ಕಾಲೇಜಿನಲ್ಲಿ ಟಾಪ್ ಒನ್ ವಿದ್ಯಾರ್ಥಿಯಾಗಿ ಹೆಸರು ಮಾಡಿದ್ದಾರಂತೆ. ಈ ಫೋಟೋ ನೋಡಿದ ಸಿನಿಪ್ರಿಯರು ಅರ್ಜಿತ್ ಕೂಡಾ ಶೀಘ್ರದಲ್ಲೇ ಚಿತ್ರರಂಗಕ್ಕೆ ಬರುವುದರಲ್ಲಿ ಸಂಶಯವೇ ಇಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಈ ಲೆಜಂಡ್ಗಳ ಪುತ್ರರ ಫೋಟೋ ನೆಟಿಜನ್ಸ್ಗೆ ಸಾಕಷ್ಟು ಮೆಚ್ಚುಗೆಯಾಗಿದೆ.