ಬಹಳ ವರ್ಷಗಳ ನಂತರ 'ಅಮ್ಮನ ಮನೆ' ಚಿತ್ರದ ಮೂಲಕ ಮತ್ತೆ ಸ್ಯಾಂಡಲ್ವುಡ್ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ರಾಘವೇಂದ್ರ ರಾಜ್‍ಕುಮಾರ್ ಇದೀಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ನಿನ್ನೆ ರಾಘಣ್ಣ ಅಭಿನಯದ ಹೊಸ ಚಿತ್ರ 'ರಾಜತಂತ್ರ' ಮುಹೂರ್ತ ಸಮಾರಂಭ ನಗರದ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು.
ತನ್ನ ಬುದ್ಧಿಶಕ್ತಿ ಮತ್ತು ತಂತ್ರಗಾರಿಕೆಯಿಂದ ದುಷ್ಟಶಕ್ತಿಗಳನ್ನು ಮಣಿಸುವ ನಿವೃತ್ತ ಕ್ಯಾಪ್ಟನ್ ಆಗಿ ರಾಘವೇಂದ್ರ ರಾಜ್‍ಕುಮಾರ್ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 'ಅಮ್ಮನ ಮನೆ' ಚಿತ್ರಕ್ಕಾಗಿ ರಾಘಣ್ಣ ಶ್ರೇಷ್ಠ ನಟ ಪ್ರಶಸ್ತಿ ಪಡೆದಿದ್ದರು. ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದ ಪಿ.ವಿ.ಆರ್. ಸ್ವಾಮಿ ಕ್ಯಾಮರಾ ಹಿಡಿಯುವ ಜೊತೆಗೆ ಇದೇ ಮೊದಲ ಬಾರಿಗೆ ನಿರ್ದೇಶಕನ ಸ್ಥಾನವನ್ನು ಕೂಡಾ ಅಲಂಕರಿಸಿದ್ದಾರೆ. ರಾಘವೇಂದ್ರ ರಾಜ್‍ಕುಮಾರ್ ಜೊತೆಗೆ ಹಿರಿಯ ನಟರಾದ ದೊಡ್ಡಣ್ಣ, ಭವ್ಯ, ಶ್ರೀನಿವಾಸಮೂರ್ತಿ, ಶಂಕರ್ ಅಶ್ವತ್ಥ್, ರಂಜನ್‍ಹಾಸನ್, ಮುನಿರಾಜು, ನೀನಾಸಂ ಅಶ್ವತ್ಥ್ ಹೀಗೆ ಹಲವಾರು ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಮುಹೂರ್ತ ದೃಶ್ಯಕ್ಕೆ ಹಿರಿಯ ನಟ ದೊಡ್ಡಣ್ಣ ಕ್ಲಾಪ್ ಮಾಡಿದರೆ, ಸಂಗೀತ ನಿರ್ದೇಶಕ ಹಂಸಲೇಖ ಕ್ಯಾಮರಾ ಚಾಲನೆ ಮಾಡಿದರು. ವಿಶ್ವ ಡಿಜಿಟಲ್ ಮೀಡಿಯಾ ಮೂಲಕ ವಿಜಯಭಾಸ್ಕರ್ ಹರಪನಹಳ್ಳಿ, ಜೆ.ಎಂ. ಪ್ರಹ್ಲಾದ್ ಹಾಗೂ ಪಿ.ಆರ್. ಶ್ರೀಧರ್ ಮೂವರೂ ಜೊತೆ ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
"ಚಿತ್ರದಲ್ಲಿ ನಾನು ನಿವೃತ್ತ ಮಿಲಿಟರಿ ಕ್ಯಾಪ್ಟನ್ ರಾಜಾರಾಮ್ ಆಗಿ ಅಭಿನಯಿಸುತ್ತಿದ್ದೇನೆ. ಶತ್ರುಗಳು ದೇಶದ ಒಳ ಹೊಕ್ಕಿದಾಗ ತನ್ನ ತಾಯ್ನೆಲವನ್ನು ಹೇಗೆ ಆ ಸೈನಿಕ ರಕ್ಷಿಸುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇಲ್ಲಿ ಕ್ಯಾಪ್ಟನ್ ರಾಜನೂ ಹೌದು, ರಾಮನೂ ಹೌದು, ಸೈನ್ಯದಿಂದ ಹೊರಬಂದ ನಂತರ ಕೂಡಾ ತನ್ನ ಕರ್ತವ್ಯ ಮುಗಿದಿಲ್ಲ ಎಂದುಕೊಂಡು ಜವಾಬ್ದಾರಿ ನಿಭಾಯಿಸುವ ವ್ಯಕ್ತಿ. ಇಲ್ಲಿ ಕೆಲಸ ಮಾಡುವುದು ತಂತ್ರವೋ ಮಂತ್ರವೋ ಎನ್ನುವುದು ಚಿತ್ರ ನೋಡಿದಾಗ ತಿಳಿಯಲಿದೆ" ಎಂದು ರಾಘವೇಂದ್ರ ರಾಜ್‍ಕುಮಾರ್ ಹೇಳಿದ್ದಾರೆ.
ಹಿರಿಯ ಬರಹಗಾರ, ಗೀತಸಾಹಿತಿ ಜೆ.ಎಂ. ಪ್ರಹ್ಲಾದ್ ಅವರು 'ರಾಜತಂತ್ರ' ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿದ್ದಾರೆ. ನಿರ್ದೇಶಕ ಪಿ.ವಿ.ಆರ್. ಸ್ವಾಮಿ ಮಾತನಾಡಿ "ನಾನು 20 ವರ್ಷಗಳ ಹಿಂದೆ ಪುಟ್ಟ ಹಳ್ಳಿಯಿಂದ ಬಂದವನು. ನನ್ನ ಈ ಪ್ರಯತ್ನದ ಹಿಂದೆ ಹಲವಾರು ಶಕ್ತಿಗಳಿವೆ. ಅಮ್ಮನ ಮನೆ ನಂತರ ರಾಘಣ್ಣ ಅವರೊಂದಿಗೆ ಎರಡನೇ ಚಿತ್ರವಿದು. ಫೈಟ್, ಹಾಡುಗಳು ಎಲ್ಲಾ ಇರುವ ಕಮರ್ಷಿಯಲ್ ಚಿತ್ರವಿದು. ಅಕ್ಟೋಬರ್ 5 ರಿಂದ ಶೂಟಿಂಗ್ ಆರಂಭಿಸಲಿದ್ದೇವೆ. ಬೆಂಗಳೂರು, ನೆಲಮಂಗಲ ಸುತ್ತಮುತ್ತ 15 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ಮಾಡಲಾಗುವುದು" ಎಂದು ಹೇಳಿದರು.
ಚಿತ್ರದ ಹಾಡುಗಳಿಗೆ ಶ್ರೀ ಸುರೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಎನ್. ನಾಗೇಶ್ ಸಂಕಲನ, ವೈಲೆಂಟ್ ವೇಲು-ರಾಮ್‍ದೇವ್ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.