ಬೆಂಗಳೂರು: ಕನ್ನಡ ಕಣ್ಮಣಿ, ರಣಧೀರ ಕಂಠೀರವ, ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅಗಲಿ ಇಂದಿಗೆ 15 ವರ್ಷಗಳು ತುಂಬುತ್ತಿದೆ. ಆದರೆ ಕೋಟ್ಯಂತರ ಅಭಿಮಾನಿಗಳ ಆರಾಧ್ಯದೈವ ಎಂದು ಕರೆಸಿಕೊಂಡಿರುವ ರಾಜ್ ಕುಮಾರ್ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.
ಪ್ರತಿ ವರ್ಷ ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ ಸ್ಮಾರಕದ ಬಳಿ ಸಾವಿರಾರು ಅಭಿಮಾನಿಗಳು ಆಗಮಿಸಿ ನೆಚ್ಚಿನ ನಟನ ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದರು. ಆದರೆ ಕೊರೊನಾದಿಂದಾಗಿ ಕುಟುಂಬ ವರ್ಗದವರು ಮಾತ್ರ ಬಂದು ತಂದೆ, ತಾಯಿ ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಇಂದು ಬೆಳ್ಳಗ್ಗೆಯೇ ರಾಘವೇಂದ್ರ ರಾಜ್ ಕುಮಾರ್ ಮತ್ತು ಪತ್ನಿ ಮಂಗಳ ಅವರು ರಾಜ್‍ಕುಮಾರ್ ಮತ್ತು ಪಾರ್ವತಮ್ಮ ರಾಜ್‍ಕುಮಾರ್ ಅವರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ತಂದೆಯ 15ನೇ ಪುಣ್ಯ ಸ್ಮರಣೆ ಮಾಡಿದರು.
11 ಗಂಟೆಯ ವೇಳೆಗೆ ಶಿವರಾಜ್ ಕುಮಾರ್ ಕುಟುಂಬ ಹಾಗು ಪುನೀತ್ ರಾಜ್‍ಕುಮಾರ್ ಕುಟುಂಬ ಸೇರಿದಂತೆ ಇಡೀ ಅಣ್ಣಾವ್ರ ಫ್ಯಾಮಿಲಿ ಬಂದು ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಈ ವರ್ಷವು ಕೂಡ ಕೊರೊನಾ ಹಾವಳಿ ಹೆಚ್ಚಾಗಿರುವ ಕಾರಣ ಗುಂಪು ಗುಂಪಾಗಿ ಅಭಿಮಾನಿಗಳ ಬರೋದಿಕ್ಕೆ ಅವಕಾಶವಿಲ್ಲ. ಜೊತೆಗೆ ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಅಭಿಮಾನಿಗಳು ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಬೇಕು. ಈ ಕಾರಣದಿಂದ ಸಮಾಧಿ ಹತ್ತಿರ ಬರುವವರ ಅಭಿಮಾನಿಗಳ ಸಂಖ್ಯೆ ಕಡಿಮೆ ಇದೆ ಎನ್ನಬಹುದು.
ಮತ್ತೊಂದು ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಕಂಠೀರವ ಸ್ಟುಡಿಯೋಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬರುವ ನಿರೀಕ್ಷೆಯಿದ್ದು ಬ್ಯಾರಿಕೇಡ್ ಅಳವಡಿಸಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ.