ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಅಂತಾ ಕರೆಯಿಸಿಕೊಂಡಿರುವುದು ಯಶ್ ಮತ್ತು ರಾಧಿಕಾ ಪಂಡಿತ್. ಸ್ಯಾಂಡಲ್ವುಡ್ ರಾಕಿಂಗ್ ಜೋಡಿಯಾಗಿರುವ ಇವರ ನಿಶ್ಚಿತಾರ್ಥ ನೆರವೇರಿ ಇಂದಿಗೆ (ಆ. 12) ಐದು ವರ್ಷ ತುಂಬಿದೆ.
ಮಗಳು ಐರಾ ಮತ್ತು ಮಗ ಯಥರ್ವ್ ಯಶ್, ರಾಧಿಕಾ ಪಂಡಿತ್ ಸಂತೋಷವನ್ನ ಮತ್ತಷ್ಟು ಹೆಚ್ಚಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮೇಲಿಂದ ಮೇಲೆ ಈ ಮುದ್ದು ಮಕ್ಕಳ ಜೊತೆ ಫೋಟೋ, ವಿಡಿಯೋವನ್ನ ಹಂಚಿಕೊಳ್ಳುವ ಯಶ್ ಹಾಗೂ ರಾಧಿಕಾ ಪಂಡಿತ್ ಜೀವನದಲ್ಲಿ ಇಂದು ಮರೆಯಲಾಗದ ದಿನ.
ಕಳೆದ 5 ವರ್ಷಗಳ ಹಿಂದೆ ರಾಕಿಂಗ್ ಸ್ಟಾರ್ ಯಶ್ ಬಹುಕಾಲದ ಗೆಳತಿ ರಾಧಿಕಾ ಪಂಡಿತ್ಗೆ ಉಂಗುರ ತೊಡಿಸುವ ಮೂಲಕ ನಾವಿಬ್ಬರು ಲವರ್ಸ್, ಮುಂದಿನ ದಿನಗಳಲ್ಲಿ ಮದುವೆಯಾಗುತ್ತೇವೆಂದು ಕನ್ನಡ ಚಿತ್ರರಂಗವಲ್ಲದೆ ಅವರ ಕೋಟ್ಯಾಂತರ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದರು.
2016 ಆಗಸ್ಟ್ 12ರಂದು ಗೋವಾದ ಕಡಲ ತೀರದ ರೆಸಾರ್ಟ್ವೊಂದರಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥಕ್ಕೆ ಅಂಬರೀಶ್, ಪತ್ನಿ ಸುಮಲತಾ ಅಂಬರೀಶ್ ಸೇರಿದಂತೆ ಚಿತ್ರರಂಗದ ಕೆಲವೇ ಕೆಲವು ಗಣ್ಯರು ಮಾತ್ರ ಸಾಕ್ಷಿಯಾಗಿದ್ದರು. ಆ ಪರಿಪೂರ್ಣ ದಿನವನ್ನು ಮತ್ತೆ ಮೆಲುಕು ಹಾಕಲು ರಾಧಿಕಾ ಪಂಡಿತ್ ತಮ್ಮ ನಿಶ್ಚಿತಾರ್ಥದ ವಿಡಿಯೋವನ್ನ ಹಂಚಿಕೊಂಡಿದ್ದಾರೆ.
ನಾನು ಈ ಅದ್ಭುತ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಇಂದಿಗೆ ಸರಿಯಾಗಿ 5 ವರ್ಷ. ನನ್ನ ನೆಚ್ಚಿನ ಸ್ಥಳದಲ್ಲಿ ನೆಚ್ಚಿನ ಜನರು ಇದ್ದಾರೆ. ನನಗೆ ಆ ದಿನ ಇನ್ನೂ ನೆನಪಿದೆ. ನಿನ್ನೆ ಮೊನ್ನೆಯಂತೆ. ಆ ಪರಿಪೂರ್ಣ ದಿನವನ್ನು ಮತ್ತೆ ಮೆಲುಕು ಹಾಕಲು ಈ ವಿಡಿಯೋವನ್ನು ಹಂಚಿಕೊಂಡಿದ್ದೇನೆಂದು ಬರೆದುಕೊಂಡಿದ್ದಾರೆ.
ನಿಶ್ಚಿತಾರ್ಥ ನಡೆದು ನಾಲ್ಕು ತಿಂಗಳ ಬಳಿಕ , 2016 ಡಿಸೆಂಬರ್ 9ರಂದು ಯಶ್ ಮತ್ತು ರಾಧಿಕಾ ಬೆಂಗಳೂರಿನ ತಾಜ್ ವೆಸ್ಟ್ ಎಂಡ್‌ನಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕಿರುತೆರೆಯಿಂದ ಜರ್ನಿ ಶುರು ಮಾಡಿದ ಯಶ್ ಮತ್ತು ರಾಧಿಕಾ ಪಂಡಿತ್ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಒಟ್ಟಿಗೆ ಬಣ್ಣ ಹಚ್ಚು ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಅಲ್ಲಿಂದ ಯಶ್ ಮತ್ತು ರಾಧಿಕಾ ಪಂಡಿತ್, ಡ್ರಾಮಾ, ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ, ಸಂತು ಸ್ಟ್ರೈಟ್ ಫಾರ್ವರ್ಡ್, ಸಿನಿಮಾಗಳ ಒಟ್ಟಿಗೆ ನಟಿಸುವ ಮೂಲಕ ಕೋಟ್ಯಂತರ ಅಭಿಮಾನಿಗಳನ್ನ ಹೊಂದಿದ್ದಾರೆ.
ಇದನ್ನೂ ಓದಿ: ಕನಸನ್ನು ನನಸು ಮಾಡಿಕೊಂಡ ಮಿಸ್ಟರ್ ಅಂಡ್ ಮಿಸ್ಸಸ್ ರಾಮಚಾರಿ!