'ರಾಧಾ ರಮಣ' ಧಾರಾವಾಹಿಯಲ್ಲಿ ಆರಾಧನಾ ಆಗಿ ನಟಿಸಿದ್ದ ಶ್ವೇತಾ ಪ್ರಸಾದ್ ಇದೀಗ ಮತ್ತೆ ಬಣ್ಣದ ಲೋಕದತ್ತ ಮುಖ ಮಾಡಿರುವ ವಿಚಾರ ವೀಕ್ಷಕರಿಗೆ ತಿಳಿದೇ ಇದೆ. ಕಿರಿಕ್ ಕೀರ್ತಿ ನಿರ್ದೇಶನದ 'ಪ್ರೀತಿ ಮದುವೆ ಇತ್ಯಾದಿ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಶ್ವೇತಾ ಇದೀಗ 'ಯುವರತ್ನ' ತಂಡ ಸೇರಿಕೊಂಡಿದ್ದಾರೆ.
ಅಂದ ಹಾಗೆ ಶ್ವೇತಾ 'ಯುವರತ್ನ' ಸಿನಿಮಾದಲ್ಲಿ ನಟಿಸುತ್ತಿಲ್ಲ. ಬದಲಿಗೆ ಕಂಠದಾನ ಕಲಾವಿದೆಯಾಗಿ ಕಾಣಿಸಿಕೊಂಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ' ಸಿನಿಮಾದಲ್ಲಿ ನಾಯಕಿಯಾಗಿ ಬಾಲಿವುಡ್ ಬೆಡಗಿ ಸಯೇಷಾ ಅಭಿನಯಿಸಿದ್ದಾರೆ. ಸಯೇಷಾ ಅವರಿಗೆ ಕನ್ನಡ ಬಾರದ ಕಾರಣ ಅವರ ಪಾತ್ರಕ್ಕೆ ಶ್ವೇತಾ ಧ್ವನಿ ನೀಡಿದ್ದಾರೆ. "ಯುವರತ್ನ ತಂಡದಿಂದ ನನಗೆ ಕರೆ ಮಾಡಿ ಸಯೇಶಾ ಪಾತ್ರಕ್ಕೆ ಧ್ವನಿ ನೀಡುತ್ತೀರಾ ಎಂದು ಕೇಳಿದರು. ಅವರು ಹಾಗೇ ಕೇಳಿದಾಗ ಯಾಕೆ ನೀಡಬಾರದು ಎಂಬ ಆಲೋಚನೆ ಬಂತು. "ಕಲಾವಿದೆಯಾದ ನಾನು ಯಾವಾಗಲೂ ಏನಾದರೂ ಕೆಲಸದಲ್ಲಿ ಸಕ್ರಿಯರಾಗಿರಬೇಕು, ಸವಾಲಿನ ಕೆಲಸಗಳನ್ನಂತೂ ಬಿಡಲೇಬಾರದು ಎಂದು ಅನಿಸಿತು ಆದ್ದರಿಂದ ಧ್ವನಿ ನೀಡಲು ಒಪ್ಪಿಕೊಂಡೆ" ಎನ್ನುತ್ತಾರೆ ಶ್ವೇತಾ.
ಇದನ್ನೂ ಓದಿ: ಶಸ್ತ್ರಚಿಕಿತ್ಸೆಗೆ ಒಳಗಾಗುವ ಸುಳಿವು ನೀಡಿದ ಅಮಿತಾಬ್ ಬಚ್ಚನ್..
ಅಂದಹಾಗೆ ಶ್ವೇತಾ ಬೇರೆ ಹೀರೋಹಿನ್ಗೆ ಧ್ವನಿ ನೀಡಿರುವುದು ಇದೇ ಮೊದಲ ಬಾರಿ. "ಕಂಠದಾನ ಮಾಡುವುದು ನಿಜವಾಗಿಯೂ ಸುಲಭದ ಕೆಲಸವಲ್ಲ, ಅದು ಕಷ್ಟಕರವಾದುದು. ಮೊದಲ ಬಾರಿ ಧ್ವನಿ ನೀಡಿದ್ದೇನೆ. ಹೊಸ ಅನುಭವ, ಖುಷಿಯಾಯಿತು ಎಂದು ಹೇಳುವ ಶ್ವೇತಾ ಇನ್ನು ಮುಂದೆ ಕೂಡಾ ಅವಕಾಶ ದೊರೆತರೆ ಕಂಠದಾನ ಮಾಡಲು ತಯಾರಾಗಿದ್ದಾರಂತೆ.