'ಮಂಗಳೂರು ಹುಡ್ಗಿ ಹುಬ್ಬಳ್ಳಿ ಹುಡ್ಗ' ಧಾರಾವಾಹಿಯ ಅಮೂಲ್ಯಳಾಗಿ ಮಿಂಚಿದ ಕರಾವಳಿ ಕುವರಿ ರಾಧಿಕಾ ರಾವ್ ಅವರ ಮನೋಜ್ಞ ಅಭಿನಯಕ್ಕೆ ಮನಸೋಲದವರಿಲ್ಲ. ಮುದ್ದು ಮುದ್ದಾಗಿರುವ ಈ ಚೆಲುವೆ ಇದೀಗ ಕಿರುತೆರೆ ಪ್ರಿಯರ ರಾಧೆಯೂ ಹೌದು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ರಾಧಾ ಪಾತ್ರಕ್ಕೆ ಜೀವ ತುಂಬುತ್ತಿರುವ ಮಂಗಳೂರು ಚೆಲುವೆ ಇದೀಗ ಹಸೆಮಣೆ ಏರಲು ತಯಾರಾಗಿದ್ದಾರೆ.
12ನೇ ತಾರೀಕಿನಿಂದು ಆಕರ್ಷ್ ಭಟ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ರಾಧಿಕಾ ರಾವ್, ಮಾರ್ಚ್ 11ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇಂಟರ್‌ನ್ಯಾಷನಲ್ ಮ್ಯಾಜಿಷಿಯನ್ ಮತ್ತು ಮೈಂಡ್ ರೀಡರ್ ಆಗಿರುವ ಆಕರ್ಷ್ ಭಟ್ ಕೂಡಾ ಮಂಗಳೂರಿನವರೇ.. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
![radhika rao](https://etvbharatimages.akamaized.net/etvbharat/prod-images/4755592_thum.jpg)
![radhika rao](https://etvbharatimages.akamaized.net/etvbharat/prod-images/4755592_thum5.jpg)
ಕಳೆದ ಮಾರ್ಚ್‌ನಲ್ಲಿ ಗೆಳತಿಯ ಮುಖೇನ ಆಕರ್ಷ್ ಅವರ ಪರಿಚಯ ಕರಾವಳಿ ಕುವರಿಗೆ ಆಗಿದೆ. ಮುದ್ದು ಮುದ್ದಾಗಿರುವ ರಾಧೆಗೆ ಮನಸೋತಿರುವ ಆಕರ್ಷ್ ಜುಲೈ ತಿಂಗಳಿನಲ್ಲಿ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಇದಕ್ಕೆ ಕರಾವಳಿ ಕುವರಿ ಅಸ್ತು ಎಂದಾಗಿದೆ. ಮದುವೆ ದಿನ ನಿಗದಿಯಾಗಿದೆ. ಆದರೆ, ಎಲ್ಲಿ ಎಂದು ಇನ್ನೂ ನಿಗದಿಯಾಗಿಲ್ಲ. ಎರಡೂ ಕುಟುಂಬದವರು ಕೂಡಾ ತುಂಬಾ ಸಂತಸದಲ್ಲಿದ್ದಾರೆ. ನಮ್ಮದು ಲವ್ ಕಮ್ ಆರೆಂಜ್ ಮ್ಯಾರೇಜ್. ಮನೆಯವರೇ ಹುಡುಕಿದ್ದರೂ ಇಷ್ಟು ಒಳ್ಳೆಯ ಜೋಡಿಯನ್ನು ಹುಡುಕಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ಮನೆಯವರ ಅಭಿಪ್ರಾಯ. ತುಂಬಾ ಸಂತಸವಾಗುತ್ತಿದೆ ಎನ್ನುತ್ತಾರೆ ರಾಧಿಕಾ ರಾವ್.
![radhika rao](https://etvbharatimages.akamaized.net/etvbharat/prod-images/4755592_thum1.jpg)
ಸದ್ಯ ರಾಧಾ ಕಲ್ಯಾಣದ ರಾಧಾಳಾಗಿ ಬ್ಯುಸಿಯಾಗಿರುವ ರಾಧಿಕಾ ರಾವ್ ಬೆಳ್ಳಿತೆರೆಗೆ ಕಾಲಿಟ್ಟಿದ್ದೂ ಆಗಿದೆ. ಅವರ ಅಭಿನಯದ ಲುಂಗಿ ಮತ್ತು ಎಲ್ಲಿದ್ದೆ ಇಲ್ಲಿ ತನಕ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ಒಟ್ಟಿನಲ್ಲಿ ಮಂಗಳೂರಿನ ಚೆಂದುಳ್ಳಿ ಚೆಲುವೆ ಡಬಲ್ ಧಮಾಕಾದ ಖುಷಿಯಲ್ಲಿದ್ದಾರೆ.