ಕೆಟ್ಟದಾಗಿ ಟ್ರೋಲ್ ಮಾಡುವ ಟ್ರೋಲ್ ಪೇಜ್ಗಳ ವಿರುದ್ಧ ಡಿಂಪಲ್ ಕ್ವೀನ್ ರಚಿತಾ ರಾಮ್ ಬೇಸರ ವ್ಯಕ್ತಪಡಿಸಿದ್ದಾರೆ. ಆಗಾಗ ಡಿಂಪಲ್ ಕ್ವೀನ್ ರಚ್ಚು ಟ್ರೋಲ್ ಆಗ್ತಾನೆ ಇರ್ತಾರೆ. ಈ ಟ್ರೋಲ್ ಬಗ್ಗೆ ಈಗ ರಚ್ಚು ಬೇಸರದಿಂದ ಮಾತನಾಡಿದ್ದಾರೆ.
ಪ್ರೊಫೆಷನಲ್ ಹಾಗೂ ಪರ್ಸನಲ್ ಲೈಫ್ ಎರಡನ್ನೂ ನಾನು ಎಂದಿಗೂ ಒಟ್ಟಿಗೆ ನೋಡುವುದಿಲ್ಲ. ನಾನು ಆಗಾಗ ಟ್ರೋಲ್ ಆಗ್ತಾನೆ ಇರ್ತೀನಿ. ಇದರಲ್ಲಿ ಖುಷಿ ಅಂದ್ರೆ ಟ್ರೋಲ್ ಮಾಡೋರು ಆಗಾಗ ರಚಿತಾ ಇದ್ದಾರೆ ಎಂದು ಜ್ಞಾಪಿಸುತ್ತಾರೆ. ಇದು ಒಂದು ರೀತಿ ನನಗೆ ಪಬ್ಲಿಸಿಟಿ ಆಗಿದೆ. ಪಬ್ಲಿಸಿಟಿ ಅನ್ನೋದು ನೆಗೆಟಿವ್ ಆಗಲಿ, ಪಾಸಿಟಿವ್ ಆಗಿರಲಿ ಅದು ನನಗೆ ಒಂದು ರೀತಿಯಲ್ಲಿ ಪಬ್ಲಿಸಿಟಿ ಆಗಿದೆ. ಆದರೆ ಇವೆಲ್ಲಾ ಹದ್ದು ಮೀರಿದರೆ ಬಹಳ ನೋವಾಗುತ್ತದೆ. ನಾವು ಕೂಡಾ ಮನುಷ್ಯರೇ. ಟ್ರೋಲನ್ನು ನಾವು ಎಷ್ಟೇ ತಮಾಷೆಯಾಗಿ ತೆಗೆದುಕೊಂಡರೂ ನಮ್ಮ ಕುಟುಂಬಕ್ಕೆ ಆ ರೀತಿ ಎನ್ನಿಸುವುದಿಲ್ಲ. ಅವರ ಮನಸ್ಸಿಗೆ ಬಹಳ ಬೇಸರವಾಗುತ್ತದೆ. ಪ್ರಾಣಿ, ಪಕ್ಷಿಗಳ ಮೇಲೆ ಟ್ರೋಲ್ ಮಾಡಿದರೆ ಅವು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ನಾವು ಮನುಷ್ಯರು ಅದೆಲ್ಲವನ್ನೂ ತಡೆದುಕೊಳ್ಳಲು ಆಗುವುದಿಲ್ಲ. ಕೆಲವೊಂದು ಟ್ರೋಲ್ಗಳು, ಕೆಟ್ಟ ಕಮೆಂಟ್ಗಳನ್ನು ನೋಡಿದರೆ ಮನಸ್ಸಿಗೆ ಬಹಳ ಬೇಸರವಾಗುತ್ತದೆ.
ಟ್ರೋಲ್ ಮಾಡುವವರು ಯಾರನ್ನು ಹೇಗೆ ಬೇಕಾದರೂ ಟ್ರೋಲ್ ಮಾಡಬಹುದು ಎಂದುಕೊಂಡಿದ್ದಾರೆ. ಪಬ್ಲಿಕ್ ಫಿಗರ್ ಆದ ಮಾತ್ರಕ್ಕೆ ಅವರ ಬಗ್ಗೆ, ಅವರ ಕುಟುಂಬದ ಬಗ್ಗೆ ಮನಸ್ಸಿಗೆ ಬಂದಂತೆ ಮಾತನಾಡಬಹುದು ಎಂದುಕೊಳ್ಳುವುದು ತಪ್ಪು. ನಾವು ಸೆಲಬ್ರಿಟಿಯಾದರೂ ನಮ್ಮನ್ನು ಈ ಸ್ಥಾನಕ್ಕೆ ಏರಿಸಿದವರು ನೀವೇ. ನಮಗೂ ನಿಮ್ಮೆಲ್ಲರ ಬಗ್ಗೆ ಅಷ್ಟೇ ಗೌರವ ಇದೆ. ನಿಮ್ಮನ್ನು ಗೌರವಿಸುವ ನಮ್ಮ ಬಗ್ಗೆ ಕೆಟ್ಟದಾಗಿ ಟ್ರೋಲ್ ಮಾಡುವುದು ತಪ್ಪು. ನೀವು ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವ ರೀತಿಯೇ ನಿಮ್ಮ ಮನೆ ಹೆಣ್ಣುಮಕ್ಕಳ ಬಗ್ಗೆ ಬೇರೆ ಯಾರಾದರೂ ಕಮೆಂಟ್ ಮಾಡಿದರೆ ಅದನ್ನು ಸ್ವೀಕರಿಸುತ್ತೀರಾ..? ಎಂದು ರಚಿತಾ ಪ್ರಶ್ನಿಸಿದ್ದಾರೆ. ಟ್ರೋಲ್ ಮಾಡೋದು ತಪ್ಪಲ್ಲ. ಆದ್ರೆ ಪಾಸಿಟಿವ್ ಆಗಿ ಟ್ರೋಲ್ ಮಾಡಿ, ನೆಗೆಟಿವ್ ಟ್ರೋಲ್ ಮಾಡಿ ಅವರ ಗೌರವಕ್ಕೆ ಧಕ್ಕೆ ತರಬೇಡಿ ಎಂದು ರಚಿತಾ ರಾಮ್ ಟ್ರೋಲ್ ಮಾಡುವವರಿಗೆ ಮನವಿ ಮಾಡಿದ್ದಾರೆ.