ಅಭಿಮಾನಿಗಳ ಆರಾಧ್ಯ ದೈವ ಡಾ. ರಾಜ್ ಕುಮಾರ್ ಅಭಿನಯದ ಯಾವುದೇ ಚಿತ್ರದ ಟೈಟಲ್ ಗಳನ್ನು ಮರುಬಳಕೆ ಮಾಡಿಕೊಳ್ಳಬಾರದು ಎಂದು ಡಾ. ರಾಜ್ಕುಮಾರ್ ಅಭಿಮಾನಿಗಳು ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದರು. ಇದಕ್ಕೆ ಫಿಲ್ಮ್ ಚೇಂಬರ್ ಕೂಡಾ ಸ್ಪಂದಿಸಿತ್ತು. ಆದರೆ ಇದೀಗ 'ಕಸ್ತೂರಿ ನಿವಾಸ' ಹೆಸರಿನಲ್ಲಿ ಹೊಸ ಸಿನಿಮಾವೊಂದು ಮುಹೂರ್ತ ಆಚರಿಸಿಕೊಂಡಿದೆ.
ಸ್ಯಾಂಡಲ್ವುಡ್ಗೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ದಿನೇಶ್ ಬಾಬು 'ಕಸ್ತೂರಿ ನಿವಾಸ' ಎಂಬ ಹಾರರ್ ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದಾರೆ. ಇದು ದಿನೇಶ್ ಬಾಬು ನಿರ್ದೇಶನದ 50ನೇ ಸಿನಿಮಾ. ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಂದು ಸಿನಿಮಾ ಅದ್ಧೂರಿಯಾಗಿ ಮುಹೂರ್ತ ಆಚರಿಸಿಕೊಂಡಿದೆ.
ಈ ಚಿತ್ರ ಪ್ಯಾರಾನಾರ್ಮಲ್ ಚಟುವಟಿಕೆಗಳ ಸುತ್ತ ಹೆಣೆದಿರುವ ಕಥೆ ಎನ್ನಲಾಗಿದೆ. ಬಿಗ್ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್, ರಾಧಾರಮಣ ಖ್ಯಾತಿಯ ಸ್ಕಂದ ಅಶೋಕ ಹಾಗೂ ಇನ್ನಿತರರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಕಥೆ 'ಕಸ್ತೂರಿ ನಿವಾಸ' ಹೆಸರಿನ ಮನೆಯಲ್ಲಿ ನಡೆಯುವ ಕಾರಣ ಚಿತ್ರಕ್ಕೆ 'ಕಸ್ತೂರಿ ನಿವಾಸ' ಎಂದು ಹೆಸರಿಟ್ಟಿರುವುದಾಗಿ ನಿರ್ದೇಶಕ ದಿನೇಶ್ ಬಾಬು ಹೇಳಿದ್ದಾರೆ.
ಚಿತ್ರಕ್ಕೆ ಅಣ್ಣಾವ್ರ ಚಿತ್ರದ ಹೆಸರಿಟ್ಟಿರುವುದರಿಂದ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎನ್ನುತ್ತದೆ ಚಿತ್ರತಂಡ. ಚಿತ್ರವನ್ನು ರುಬಿನ್ ರಾಜ್ ನಿರ್ಮಾಣ ಮಾಡುತ್ತಿದ್ದು ಚಿತ್ರತಂಡ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇದೆ. ಸೆಪ್ಟೆಂಬರ್ನಲ್ಲಿ ಚಿತ್ರೀಕರಣ ಆರಂಭಿಸಲು ದಿನೇಶ್ ಬಾಬು ನಿರ್ಧರಿಸಿದ್ದಾರೆ.