ಜನಪ್ರಿಯ ಗುಳಿ ಕೆನ್ನೆ ನಟಿ ರಚಿತಾ ರಾಮ್ ಅವರಿಗೆ ‘ಕಸ್ತೂರಿ’ ಎಂಬ ಹೆಸರು ಯಾಕೋ ಬಿಡುವಂತೆ ಕಾಣುತ್ತಿಲ್ಲ. ಹಿರಿಯ ನಿರ್ದೇಶಕ ದಿನೇಶ್ ಬಾಬು ಅವರ 50ನೇ ಚಿತ್ರ ‘ಕಸ್ತೂರಿ ಮಹಲ್’ ಮುಹೂರ್ತಕ್ಕೆ ಬಂದಿದ್ದ ನಟಿ ರಚಿತಾ ರಾಮ್, ಆಮೇಲೆ ಈ ಚಿತ್ರದಿಂದ ತಾವೇ ಹೊರ ನಡೆದರು. ಆ ಜಾಗಕ್ಕೆ ಶಾನ್ವಿ ಶ್ರೀವಾಸ್ತವ್ ಬಂದರು.
ಈಗ ರಚಿತಾ ರಾಮ್ ಮತ್ತೊಂದು ಸಿನಿಮಾ ಆಯ್ಕೆ ಮಾಡಿಕೊಂಡಿದ್ದಾರೆ. ಆ ಚಿತ್ರಕ್ಕೆ ‘ಪಂಕಜ ಕಸ್ತೂರಿ’ ಎಂದು ಟೈಟಲ್ ಇಡಲಾಗಿದೆ. ಈ ಚಿತ್ರಕ್ಕೆ ರಚಿತಾ ರಾಮ್ ಸ್ನೇಹಿತ, ನಿರ್ದೇಶಕ ಮಯೂರ್ ರಾಘವೇಂದ್ರ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮಯೂರ್ ಈ ಹಿಂದೆ ‘ಕನ್ನಡ್ ಗೊತ್ತಿಲ್ಲ’ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದರು.
ಹಾಗೆ ನೋಡಿದರೆ ಮಯೂರ್ ರಾಘವೇಂದ್ರರ ಪ್ರಥಮ ನಿರ್ದೇಶನದ ‘ಕನ್ನಡ್ ಗೊತ್ತಿಲ್ಲ’ ಚಿತ್ರಕ್ಕೆ ಮೊದಲು ಆಯ್ಕೆಯಾದವರು ರಚಿತಾ ರಾಮ್. ಆಗ ಅವರ ಕಾಲ್ ಶೀಟ್ ಸಮಸ್ಯೆ ಇತ್ತು. ಆ ಜಾಗಕ್ಕೆ ಮತ್ತೊಬ್ಬ ಜನಪ್ರಿಯ ನಟಿ ಹರಿಪ್ರಿಯಾ ಬಂದರು. ಈಗ ಎರಡನೇ ಬಾರಿ ರಚಿತಾ ರಾಮ್ ಮತ್ತೆ ಮಯೂರ್ ರಾಘವೇಂದ್ರ ಸಿನಿಮಾಕ್ಕೆ ಆಯ್ಕೆ ಆಗಿದ್ದಾರೆ.
ರಚಿತಾ ಅಭಿನಯದ ‘ಪಂಕಜ ಕಸ್ತೂರಿ’ ಸಿನಿಮಾದ ಫಸ್ಟ್ ಲುಕ್ಅನ್ನು ದೀಪಾವಳಿ ಹಬ್ಬದಂದು ಬಿಡುಗಡೆ ಮಾಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.
ತಮಿಳಿನ ‘ಕೋಲಮಾವು ಕೋಕಿಲ’ ಎಂಬ ಸಿನಿಮಾದಿಂದ ಈ ಚಿತ್ರದ ಕಥೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಕೋಲಮಾವು ಕೋಕಿಲ ಚಿತ್ರವು 2018ರಲ್ಲಿ ತೆರೆ ಕಂಡಿದ್ದು, ಚಿತ್ರದಲ್ಲಿ ನಯನತಾರಾ ಅಭಿನಯಿಸಿದ್ದರು.