ಮುಂಬೈ: ಬಾಲಿವುಡ್ನ ಬಹುನಿರೀಕ್ಷಿತ ಚಿತ್ರಗಳಾದ ತಾನು ಅಭಿನಯಿಸಿರುವ 'ಸೂರ್ಯವಂಶಿ' ಮತ್ತು 'ಬೆಲ್ ಬಾಟಮ್' ಚಿತ್ರಗಳು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಬಿಡುಗಡೆಯಾಗುತ್ತವೆ ಎಂಬ ವದಂತಿಗಳನ್ನು ನಟ ಅಕ್ಷಯ್ ಕುಮಾರ್ ತಳ್ಳಿಹಾಕಿದ್ದಾರೆ.
ಈ ಮೊದಲು ಸೂರ್ಯವಂಶಿ ಚಿತ್ರವನ್ನು ಏಪ್ರಿಲ್ 30ರಂದು ಬಿಡುಗಡೆ ಮಾಡಲು ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಕೋವಿಡ್ ಕಾರಣದಿಂದ ತೆರೆಗೆ ತರಲು ಸಾಧ್ಯವಾಗಲಿಲ್ಲ. ಈಗ ಯಾವುದೇ ದಿನಾಂಕವನ್ನು ಚಿತ್ರ ನಿರ್ಮಾಪಕರು ನಿರ್ಧರಿಸಿಲ್ಲ.
ಮತ್ತೊಂದು ಚಿತ್ರವಾದ ಬೆಲ್‌ಬಾಟಮ್ ಮೇ 28ರಂದು ಬಿಡುಗಡೆಯಾಗುವುದಿಲ್ಲ ಎಂದು ಖಚಿತವಾಗಿದ್ದು, ಎರಡೂ ಚಿತ್ರಗಳು ಸ್ವಾತಂತ್ರ್ಯ ದಿನದಂದು ಬಿಡುಗಡೆಯಾಗುವ ಊಹೆಗಳು ಹರಿದಾಡುತ್ತಿವೆ. ಆದರೆ ನಿರ್ಮಾಪಕರು ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಶಾಲಾ-ಕಾಲೇಜು ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ಕೊಡಿಸಿ: ಸಿಎಂಗೆ ಪತ್ರ ಬರೆದ ಕಿರಣ್ ರಾಜ್
ಮತ್ತೊಂದೆಡೆ ಸ್ಟ್ರೀಮಿಂಗ್ ಮಾಹಿತಿ ನೀಡುವ ಲೆಟ್ಸ್ ಓಟಿಟಿ ಟ್ವೀಟ್ ಮಾಡಿದ್ದು, ನೇರವಾಗಿ ಅಮೆಜಾನ್ ಪ್ರೈಮ್ನಲ್ಲಿ ಬೆಲ್ ಬಾಟಂ ಕಾಣಿಸಿಕೊಳ್ಳಲಿದೆ ಎಂದಿದ್ದು, ಆಗಸ್ಟ್ 13ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ತಾತ್ಕಾಲಿಕ ದಿನಾಂಕವನ್ನೂ ಹೇಳಿದೆ.
'ಬೆಲ್‌ಬಾಟಮ್' ಚಿತ್ರವನ್ನು ರಂಜಿತ್ ಎಂ ತಿವಾರಿ ನಿರ್ದೇಶಿಸಿದ್ದು, ವಶು ಭಗ್ನಾನಿ ಅವರ ಪೂಜಾ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದೆ. ವಾಣಿ ಕಪೂರ್, ಹುಮಾ ಖುರೇಷಿ ಮತ್ತು ಲಾರಾ ದತ್ತಾ ಕೂಡ ಇದ್ದಾರೆ.