ಬೆಂಗಳೂರು: ಸ್ಯಾಂಡಲ್ವುಡ್ ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಚಿತ್ರರಂಗದ ಪರವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪುನೀತ ನಮನ’ (Puneetha Namana) ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ ಸಹ ಭಾಗಿಯಾಗಿದ್ದರು.
'ಪುನೀತ್ ನಮನ' ಕಾರ್ಯಕ್ರಮದ ವೇಳೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ವೇದಿಕೆಯ ಮುಂದಿನ ಆಸನದಲ್ಲಿ ಆಸೀನರಾಗಿದ್ದರು. ಈ ಸಂದರ್ಭದಲ್ಲಿ ಅಗಲಿದ ಪತಿ ನೆನೆದು ಭಾವುಕರಾಗಿದ್ದು, ಕಣ್ಣೀರು ಹಾಕಿದ್ದರು. ಅಲ್ಲದೆ, ಅರ್ಧದಲ್ಲೇ ಕಾರ್ಯಕ್ರಮದಿಂದ ಹೊರ ನಡೆದರು. ಆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಾಕಿಕೊಂಡಿದ್ದಾರೆ.
‘ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಅಗಲಿಕೆ ನಮಗಷ್ಟೇ ಅಲ್ಲದೇ ಇಡೀ ರಾಜ್ಯಕ್ಕೆ ಆಘಾತಕಾರಿ ವಿಷಯ. ನಿಷ್ಕಲ್ಮಶ ಪ್ರೀತಿಯಿಂದ, ಅಕ್ಕರೆಯ ಅಭಿಮಾನದಿಂದ ಅವರನ್ನು ಪವರ್ ಸ್ಟಾರ್ ಆಗಿ ರೂಪಿಸಿದ್ದ ನಿಮ್ಮೆಲ್ಲರಿಗೆ ಅವರ ವಿದಾಯ ತಂದಿತ್ತ ದುಃಖ ಎಷ್ಟಿರಬಹುದೆಂದು ಊಹಿಸಲು ಸಾಧ್ಯವಿಲ್ಲ. ಆದರೂ ಇಂತಹ ಸಂದರ್ಭದಲ್ಲಿ ನೀವುಗಳು ಎಲ್ಲಿಯೂ ಸಂಯಮ ಕಳೆದುಕೊಳ್ಳದೇ ಅಹಿತಕರ ಘಟನೆಗಳು ನಡೆಯಲು ಬಿಡದೇ ಅವರಿಗೊಂದು ಅತ್ಯಂತ ಗೌರವಯುತ ಬೀಳ್ಕೊಡುಗೆ ನೀಡುವಲ್ಲಿ ಸಹಕರಿಸಿದ್ದೀರಿ’ ಎಂದು ಪತ್ರ ಆರಂಭಿಸಿದ್ದಾರೆ.
ಇದನ್ನೂ ಓದಿ: 'ಹೇಗಾದ್ರೂ ಮಾಡಿ ನನ್ನ ಕಳುಹಿಸಿ, ಅವನನ್ನು ಕರೆಯಿಸಿಕೊಂಡು ಬಿಡಿ ಪ್ಲೀಸ್': ರಾಘಣ್ಣನ ಕಣ್ಣೀರು
‘ಸಿನಿಮಾ ಪ್ರೇಮಿಗಳಷ್ಟೇ ಅಲ್ಲದೇ, ವಯೋಮಾನದ ಮಿತಿಯಿಲ್ಲದೇ, ದೇಶವಿದೇಶಗಳಿಂದ ಕೋಟ್ಯಂತರ ಜನರು ಸಂತಾಪ ಸೂಚಿಸುವುದನ್ನು ಕಂಡಾಗ ಮನಸ್ಸು ಭಾರವಾಗುತ್ತದೆ. ನಿಮ್ಮ ಪ್ರೀತಿಯ ಅಪ್ಪು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಾ ಸಾವಿರಾರು ಸಂಖ್ಯೆಯಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡಿಸುವುದನ್ನು ನೋಡಿದಾಗ ಕಣ್ಣುಂಬಿ ಬರುತ್ತದೆ. ಅವರನ್ನು ಆದರ್ಶವಾಗಿಟ್ಟುಕೊಂಡು ನೀವುಗಳು ಮಾಡುವ ಸತ್ಕಾರ್ಯಗಳಲ್ಲಿ, ಅವರ ನೆನಪುಗಳು ನಿಮ್ಮಲ್ಲಿ ಮೂಡಿಸುವ ಉತ್ಸಾಹದಲ್ಲಿ ಅವರೆಂದಿಗೂ ಜೀವಂತವಾಗಿರುತ್ತಾರೆ. ವಿಶ್ವದಾದ್ಯಂತ ನಮ್ಮ ಶೋಕವನ್ನು ಹಂಚಿಕೊಂಡು ಬೆಂಬಲಕ್ಕೆ ನಿಂತ ಎಲ್ಲಾ ಸಹೃದಯಿ ಅಭಿಮಾನಿ ದೇವರುಗಳು ಮತ್ತು ಸಾರ್ವಜನಿಕರಿಗೆ ನಮ್ಮ ಇಡೀ ಕುಟುಂಬದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು’ ಎಂದು ಬರೆದಿದ್ದಾರೆ.