ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸದ್ಯ ಯುವರತ್ನ ಸಕ್ಸಸ್ ಸಂಭ್ರಮದಲ್ಲಿದ್ದಾರೆ. ಸಿನಿಮಾ ರಿಲೀಸ್ ಆದ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕೊರೊನಾ ಹೊಸ ನಿಯಮದ ವಿರುದ್ಧ ಹೋರಾಡಿ ಗೆಲುವು ಸಾಧಿಸಿರುವ ಅಪ್ಪು ಹಾಗೂ ಚಿತ್ರತಂಡ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು.
ವಿಶೇಷ ಅಂದ್ರೆ ಪವರ್ ಸ್ಟಾರ್ ಮತ್ತು ತಂಡಕ್ಕೆ ನವರಸನಾಯಕ ಜಗ್ಗೇಶ್ ಸಾಥ್ ನೀಡಿದ್ದಾರೆ. ಜಗ್ಗೇಶ್ ರಾಯರ ಅಪ್ಪಟ್ಟ ಭಕ್ತ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಜಗ್ಗೇಶ್ ಆಗಾಗ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆಯುತ್ತಿರುತ್ತಾರೆ.
ಆದರೆ, ಇದೀಗ ಪುನೀತ್ ರಾಜ್‍ಕುಮಾರ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ಯುವರತ್ನ ಸಿನಿಮಾದ ಕಾರ್ಯಕಾರಿ ನಿರ್ಮಾಪಕರು, ಯುವರತ್ನ ಸಿನಿಮಾದ ವಸ್ತ್ರ ವಿನ್ಯಾಸಕ ಯೋಗಿ ಜಿ ರಾಜ್, ಜಗ್ಗೇಶ್ ಜೊತೆಗೂಡಿ ರಾಯರ ದರ್ಶನ ಪಡೆದಿದ್ದಾರೆ.
ಮಂತ್ರಾಲಯ ಮಠಾಧೀಶರಾದ ಸುಭುದೇಂದ್ರ ತೀರ್ಥ ಸ್ವಾಮಿಜೀಗಳು ಪುನೀತ್ ರಾಜ್‍ಕುಮಾರ್ ಹಾಗೂ ಜಗ್ಗೇಶ್ ಅವರಿಗೆ ಸನ್ಮಾನ ಮಾಡಿ ಆಶೀರ್ವಾದ ಮಾಡಿದರು. ಇನ್ನು, ನಟ ಜಗ್ಗೇಶ್ ಪ್ರತಿವರ್ಷ ತಮ್ಮ ಹುಟ್ಟುಹಬ್ಬವನ್ನು ಮಂತ್ರಾಲಯದಲ್ಲಿ ಆಚರಣೆ ಮಾಡಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಹೋಗಿರಲಿಲ್ಲ. ಸದ್ಯ ಯುವರತ್ನ ಚಿತ್ರ ತಂಡದೊಂದಿಗೆ ಜಗ್ಗೇಶ್ ರಾಯರ ದರ್ಶನ ಪಡೆದಿದ್ದಾರೆ.
ಪವರ್ ಸ್ಟಾರ್ ಕೂಡ ಆಗಾಗ ಮಂತ್ರಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ. ಕಳೆದ ಬಾರಿ ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಅಪ್ಪು ಡಾ.ರಾಜ್ ಕುಮಾರ್ ಹಾಡಿರುವ ರಾಯರ ಹಾಡು ಹಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದರು.