ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಸಮಾಜ ಸೇವಕರಾದ ಡಾ. ವೀರೇಂದ್ರ ಹೆಗ್ಗಡೆ ನಿನ್ನೆ , ನವೆಂಬರ್ 25 ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 72ನೇ ವಸಂತಕ್ಕೆ ಕಾಲಿಟ್ಟ ವೀರೇಂದ್ರ ಹೆಗ್ಗಡೆ ಅವರಿಗೆ ಸಾವಿರಾರು ಅಭಿಮಾನಿಗಳು ಹಾಗು ಗಣ್ಯ ವ್ಯಕ್ತಿಗಳು ಶುಭಾಶಯ ಕೋರಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೂಡಾ ವೀರೇಂದ್ರ ಹೆಗ್ಗಡೆ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.
ವೀರೇಂದ್ರ ಹೆಗ್ಗಡೆ ಅವರೊಂದಿಗೆ ಇರುವ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪುನೀತ್ ರಾಜ್‍ಕುಮಾರ್, "ಪುಣ್ಯಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಡಾ.ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ಶುಭ ಕೋರಿದ್ದಾರೆ. ಪುನೀತ್ ಹಾಗೂ ಕುಟುಂಬ ಧರ್ಮಸ್ಥಳಕ್ಕೆ ಹೋದಾಗಲೆಲ್ಲಾ ತಪ್ಪದೆ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಬರುತ್ತಾರೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೂ, ಡಾ. ರಾಜ್‍ಕುಮಾರ್ ಕುಟುಂಬಕ್ಕೂ ಬಹಳ ಹಿಂದಿನಿಂದ ಅವಿನಾಭಾವ ಸಂಬಂಧ ಇದೆ. ಇದೇ ಬಾಂಧವ್ಯ ಇಂದಿಗೂ ಮುಂದುವರೆಯುತ್ತಾ ಬಂದಿದೆ ಎನ್ನುವುದಕ್ಕೆ ಪುನೀತ್ , ವೀರೇಂದ್ರ ಹೆಗ್ಗಡೆ ಅವರ ಫೋಟೋ ಹಂಚಿಕೊಂಡು ಶುಭ ಕೋರಿರುವುದೇ ಸಾಕ್ಷಿ.