ದೇಶಾದ್ಯಂತ ಲೋಕಸಭಾ ಚುನಾವಣೆ ಕಾವು ಜೋರಾಗಿದ್ದು, ನಾಳೆ ಹಾಗೂ ಏಪ್ರಿಲ್ 23ರಂದು ಕರ್ನಾಟಕದಲ್ಲಿ 2 ಹಂತಗಳ ಮತದಾನ ನಡೆಯುತ್ತಿದೆ. ಇನ್ನು ಸಾಕಷ್ಟು ಜನ ಮತ ಹಾಕಲು ದೂರದೂರಿನಿಂದ ತಮ್ಮ ಸ್ವಂತ ಊರುಗಳಿಗೆ ತೆರಳುತ್ತಿದ್ದಾರೆ.
ಕಳೆದ ಬಾರಿ ಪಂಚಾಯತ್ ಎಲೆಕ್ಷನ್ ವೇಳೆ ಪುನೀತ್ ತಮ್ಮ ಮತ ಚಲಾಯಿಸಿದ್ದರು. ಆದರೆ ಈ ಬಾರಿ ಪುನೀತ್ ರಾಜ್ಕುಮಾರ್ ಹಾಗೂ ಅವರ ಪತ್ನಿ ಅಶ್ವಿನಿ ಮತದಾನದಿಂದ ವಂಚಿತರಾಗಿದ್ದಾರೆ. ಪುನೀತ್ ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ದಕ್ಷಿಣ ಅಮೆರಿಕಾ ಪ್ರವಾಸದಲ್ಲಿರುವುದು ಇದಕ್ಕೆ ಕಾರಣ. ಮಕ್ಕಳಿಗೆ ಬೇಸಿಗೆ ರಜೆ ಇರುವುದರಿಂದ ಪುನೀತ್ ಪ್ರತಿ ವರ್ಷ ಈ ಸಮಯಕ್ಕೆ ಕುಟುಂಬದೊಂದಿಗೆ ಹೊರಗೆ ಹೋಗುವುದು ವಾಡಿಕೆ. ಅದೇ ರೀತಿ ಈ ಬಾರಿ ಕೂಡಾ ಪುನೀತ್ ಪತ್ನಿ ಹಾಗೂ ಮಕ್ಕಳನ್ನು ಕರೆದುಕೊಂಡು ಫಾರಿನ್ ಟ್ರಿಪ್ ಹೋಗಿದ್ದಾರೆ.
ಇನ್ನು 5 ತಿಂಗಳ ಹಿಂದೆಯೇ ಅಂದರೆ ಲೋಕಸಭೆ ಚುನಾವಣೆ ಘೋಷಣೆಯಾಗುವುದಕ್ಕೆ ಮುನ್ನವೇ ಈ ಬೇಸಿಗೆಗೆ ಸೌತ್ ಅಮೆರಿಕಾ ಟೂರ್ ಹೋಗಲು ನಿರ್ಧಾರವಾಗಿತ್ತಂತೆ. ಏಪ್ರಿಲ್ 14 ರಂದು ಪುನೀತ್, ಮಡದಿ ಅಶ್ವಿನಿ ಹಾಗೂ ಮಕ್ಕಳಾದ ವಂದಿತ ಹಾಗೂ ಧೃತಿ ಜೊತೆಗೆ ವಿದೇಶಕ್ಕೆ ಹಾರಿದ್ದಾರೆ. ಇನ್ನು ಅವರು ವಾಪಸಾಗುವುದು ಮೇ 15 ರಂದು ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.