ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ದರ್ಬಾರ್ ಸಿನಿಮಾವನ್ನು ನರ್ತಕಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಗಿದ್ದು, ಇದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡಿವೆ. ರಣಧೀರ ಪಡೆಯ ಕನ್ನಡಪರ ಹೋರಾಟಗಾರರು ನರ್ತಕಿ ಚಿತ್ರಮಂದಿರದ ಮುಂದೆ ಪ್ರತಿಭಟನೆ ನಡೆಸಿ ಚಿತ್ರಮಂದಿರದ ಮಾಲೀಕರ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ಇನ್ನು ಚಿತ್ರಮಂದಿರಕ್ಕೆ ಬೀಗ ಹಾಕಲು ಮುಂದಾದ ರಣಧೀರ ಪಡೆ ಸದಸ್ಯರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಅಲ್ಲದೆ ಪೊಲೀಸರ ಬಿಗಿ ಬಂದೋಬಸ್ತ್ ನಡುವೆ ಕೆಜಿ ರಸ್ತೆಯ ನರ್ತಕಿ ಚಿತ್ರಮಂದಿರದಲ್ಲಿ ಸುಮಾರು 20 ವರ್ಷಗಳ ನಂತರ ಪರಭಾಷಾ ಚಿತ್ರವೊಂದು ಬಿಡುಗಡೆಯಾಗಿದೆ.
ಇದನ್ನು ಖಂಡಿಸಿರುವ ರಣಧೀರ ಪಡೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೈ ಕಟ್ಟಿ ಕುಳಿತಿದೆ. ಸುಮಾರು 25 ವರ್ಷಗಳ ಹಿಂದೆ ಕೆಜಿ ರಸ್ತೆಯ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳು ಮಾತ್ರ ಬಿಡುಗಡೆಯಾಗಬೇಕು ಎಂದು ಹೋರಾಟ ಮಾಡಿ ಕೆಜಿ ರಸ್ತೆಯ ಚಿತ್ರಮಂದಿರಗಳನ್ನು ಕನ್ನಡ ಚಿತ್ರಗಳಿಗೆ ಮೀಸಲು ಮಾಡಿಸಿದರು. ಆದರೆ, ಈಗ ಅಣ್ಣಾವ್ರ ಬದ್ಧತೆ ಯಾರಲ್ಲೂ ಇಲ್ಲ. ರಜನಿಕಾಂತ್ ಕರ್ನಾಟಕವನ್ನು ಕೇವಲ ವ್ಯಾವಹಾರಿಕವಾಗಿ ಬಳಸುತ್ತಾರೆ. ಅವರ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.