ಉಮಾಪತಿ ನಿರ್ಮಾಣದ 'ರಾಬರ್ಟ್' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವುದು ತಿಳಿದ ವಿಚಾರ. ಕಳೆದ ವಾರ ಉಮಾಪತಿ ಹುಟ್ಟುಹಬ್ಬದಂದು ಈ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿತ್ತು. ಈ ಸಿನಿಮಾ ಬಿಡುಗಡೆಗೂ ಮುನ್ನವೇ ಉಮಾಪತಿ ದರ್ಶನ್ ಜೊತೆಗೆ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ.
ದರ್ಶನ್ ಹಾಗೂ ಉಮಾಪತಿ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಬರುತ್ತಿರುವ ಸುದ್ದಿ ಕೇಳಿ ಅಭಿಮಾನಿಗಳು ಸಂತೋಷಗೊಂಡಿದ್ದಾರೆ. ಈ ಚಿತ್ರವನ್ನು ಕೂಡಾ ತರುಣ್ ಸುಧೀರ್ ನಿರ್ದೇಶಿಸಲಿದ್ದು, ನಿನ್ನೆ ಬೆಂಗಳೂರಿನ ತರುಣ್ ಸುಧೀರ್ ಕಚೇರಿಯಲ್ಲಿ ಸರಳವಾಗಿ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಚಿತ್ರದ ಹೆಸರನ್ನು ಇನ್ನೂ ಫೈನಲ್ ಮಾಡದ ಕಾರಣ ಪ್ರೊಡಕ್ಷನ್ ನಂಬರ್ 4 ಹೆಸರಿನಲ್ಲಿ ಪೂಜೆ ಮಾಡಲಾಗಿದೆ.
ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್ನಲ್ಲಿ 'ಸಿಂಧೂರ ಲಕ್ಷಣ' ಸಿನಿಮಾ ಬರಲಿದೆ ಎಂದು ಕೆಲವು ದಿನಗಳ ಹಿಂದೆ ಹೇಳಲಾಗಿತ್ತು. ರಾಬಿನ್ ಹುಡ್ ಶೈಲಿಯಲ್ಲಿರುವ ಸಿಂಧೂರ ಲಕ್ಷ್ಮಣನ ಪಾತ್ರದಲ್ಲಿ ದಚ್ಚು ಮಿಂಚಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಸಿಂಧೂರ ಲಕ್ಷ್ಮಣ 18 ನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದ ವೀರ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿಹುಟ್ಟಿ 24 ನೇ ವಯಸ್ಸಿಗೆ ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದ ಸಿಂಧೂರ ಲಕ್ಷಣನಾಗಿ ದರ್ಶನ್ ತೆರೆ ಮೇಲೆ ಬರಲು ತಯಾರಿ ನಡೆಸುತ್ತಿದ್ದು ಅದಕ್ಕೆ ಉಮಾಪತಿ ಬಂಡವಾಳ ಹೂಡಲಿದ್ದಾರೆ ಎನ್ನಲಾಗಿತ್ತು. ಇದೀಗ ಈ ಹೊಸ ಸಿನಿಮಾ ಘೋಷಣೆಯಾಗಿರುವುದು ನೋಡಿದರೆ ಇದು ಬಹುಶ: ಅದೇ ಸಿನಿಮಾ ಇರಬಹುದಾ ಎಂಬ ಅನುಮಾನ ಕಾಡುತ್ತಿದೆ.
ಈ ಚಿತ್ರದ ಬಗ್ಗೆ ದರ್ಶನ್, ಉಮಾಪತಿ ಅಥವಾ ತರುಣ್ ಸುಧೀರ್ ಆಗಲಿ ಹೆಚ್ಚಿನ ಮಾಹಿತಿ ತಿಳಿಸಿಲ್ಲ. ಒಟ್ಟಿನಲ್ಲಿ ದರ್ಶನ್ ಅವರ ಹೊಸ ಸಿನಿಮಾ ಬರಲಿದೆ ಎಂದು ಅಭಿಮಾನಿಗಳು ಖುಷಿಯಲ್ಲಿರುವುದಂತೂ ನಿಜ. ಆದಷ್ಟು ಬೇಗ ಈ ಹೊಸ ಚಿತ್ರದ ಶೂಟಿಂಗ್ ಆರಂಭವಾಗಲಿದೆ.